ಕಲಬುರಗಿ: ಕಾಳಗಿಯಲ್ಲಿ ಪತ್ತೆಯಾದ ಬೃಹತ್ ಮೊತ್ತದ ಅಕ್ರಮ ಗಾಂಜಾದ ಹಿಂದೆ ಪ್ರಭಾವಿ ರಾಜಕಾರಣಿಗಳ ಕೈವಾಡವಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ್ ಹಾಗೂ ಕಾಂಗ್ರೆಸ್ ಮುಖಂಡ ಸುಭಾಷ ರಾಠೋಡ್ ಆರೋಪಿಸಿದ್ದಾರೆ.
ಬೆಂಗಳೂರು ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ, ಪತ್ತೆ ಹಚ್ಚಲಾದ ಬೃಹತ್ ಮೊತ್ತದ ಅಕ್ರಮ ಗಾಂಜಾ ದಂಧೆ ಹಿಂದೆ ಕಾಣದ ಕೈಗಳು ಅಡಗಿವೆ ಎಂಬ ಅನುಮಾನ ವ್ಯಕ್ತಪಡಿಸಿದರು. ಅಲ್ಲದೆ ಸ್ಥಳೀಯ ಪೊಲೀಸರನ್ನು ಕೂಡ ಹತ್ತಿಕ್ಕುವ ಕೆಲಸ ಈ ಪ್ರಭಾವಿಗಳು ಮಾಡಿದ್ದಾರೆ. ಆದ್ದರಿಂದ ಸ್ವತಃ ಪೊಲೀಸ್ ಇಲಾಖೆಯವರಿಗೆ ಸ್ಥಳೀಯ ಪೋಲಿಸರಿಗೆ ಮಾಹಿತಿ ನೀಡದೆ ಬೆಂಗಳೂರಿನಿಂದ ವಿಶೇಷ ತಂಡ ಆಗಮಿಸಿ ಗಾಂಜಾ ಮಾಫಿಯಾವನ್ನು ಭೇದಿಸಲಾಗಿದೆ ಎಂದು ದೂರಿದರು.
ಗಾಂಜಾ ಪ್ರಕರಣದಲ್ಲಿ ಬಿಜೆಪಿ ಕಾರ್ಯಕರ್ತರ ಬಂಧನ ?
ಕಾಳಗಿಯ ಕುರಿ ಫಾರಂನಲ್ಲಿ ಪತ್ತೆಯಾಗಿರುವ ಗಾಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾದ ಆರೋಪಿ ಚಂದ್ರಕಾಂತ ಬಿಜೆಪಿ ಪಕ್ಷದ ಕಾರ್ಯಕರ್ತ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಟ್ವಿಟ್ಟರ್ ಮೂಲಕ ದೂರಿದ್ದಾರೆ.
ಆರೋಪಿ ಭಾವಚಿತ್ರದೊಂದಿಗೆ ಸರಣಿ ಟ್ವೀಟ್ಟ್ ಮಾಡಿರುವ ಶಾಸಕ ಪ್ರಿಯಾಂಕ್ ಖರ್ಗೆ, ಬಿಜೆಪಿಗರಿಗೆ ನೇರವಾಗಿ ಕುಟುಕಿದರು. ನೀವು ಅಧಿಕಾರದಲ್ಲಿದ್ದೀರಿ ಮತ್ತು ಎಲ್ಲಾ ಸಂಪನ್ಮೂಲಗಳನ್ನು ಹೊಂದಿದ್ದೀರಿ, ದಯವಿಟ್ಟು ಕಲಬುರಗಿಯಲ್ಲಿ ಎಷ್ಟು ಜೂಜಿನ ಅಡ್ಡೆಗಳು ಬೆಳೆದಿವೆ ಎಂಬುದನ್ನು ಕಂಡುಕೊಳ್ಳಲಿ. ಮನೋರಂಜನಾ ಕ್ಲಬ್‌ಗಳನ್ನು ನಡೆಸಲು ಯಾರು ಅನುಮತಿ ನೀಡುತ್ತಿದ್ದಾರೆ? ಇವರೆಲ್ಲ ಯಾವ ರಾಜಕೀಯ ರಕ್ಷಣೆ ಅಡಿಯಲ್ಲಿ ಬೆಳೆಯುತ್ತಿದ್ದಾರೆ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.