ಕಲಬುರಗಿ: ಶಾಸಕರಿಂದ ವರ್ಗಾವಣೆಗೆ ಶಿಫಾರಸು ವಿವಾದ ವಿಚಾರವಾಗಿ ಜೀವ ಬೆದರಿಕೆ ಹಾಕಲಾಗಿದೆ ಎಂದು ಬಿಸಿಎಂ ಇಲಾಖೆಯ ಜಿಲ್ಲಾ ಅಧಿಕಾರಿ ರಮೇಶ್ ಜಿ. ಸಂಗಾ ಶಾಸಕರೊಬ್ಬರ ಮೂವರು ಬೆಂಬಲಿಗರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಶಾಸಕರ ಬೆಂಬಲಿಗರೆನ್ನಲಾದ ಮಾಜಿ ಕಾರ್ಪೋರೇಟರ್ ಪ್ರಭು ಹಾದಿಮನಿ, ವಿಶಾಲ್ ಧರ್ಗಿ ಮತ್ತು ಚಂದ್ರಕಾಂತ ಸಂತಪುರ ವಿರುದ್ಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ರಮೇಶ್ ಜಿ. ಸಂಗಾ ವರ್ಗಾವಣೆಗೆ ಶಾಸಕರು ಸಚಿವ ಶ್ರೀರಾಮುಲು ಅವರಿಗೆ ಶಿಫಾರಸು ಮಾಡಿರುವ ಕುರಿತಾಗಿ ರಮೇಶ್ ಸಂಗಾ ಶಾಸಕರ ವಿರುದ್ಧ ಹಣದ ಬೇಡಿಕೆ, ಕೋವಿಡ್-19 ಕಾರ್ಯಕ್ಕೆ ಅಡ್ಡಿಪಡಿಸಿದ್ದಾರೆಂದು ಆರೋಪಿಸಿದ್ದರು.
ಗುರುವಾರ ಈ ವರದಿ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದರಿಂದ ಶಾಸಕರ ಮೂವರು ಬೆಂಬಲಿಗರು ತಡರಾತ್ರಿ ಸುಮಾರು1-30ರ ವೇಳೆಗೆ ತನಗೆ ಕರೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸುವುದರ ಜೊತೆಗೆ ಜೀವ ಬೆದರಿಕೆ ಹಾಕಿರುವುದಾಗಿ ಆಡಿಯೋ ಸಮೇತ ರಮೇಶ್ ಸಂಗಾ ಠಾಣೆಗೆ ದೂರು ನೀಡಿದ್ದಾರೆ. ಈ ಕುರಿತು ವಿವಿ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ FIR ದಾಖಲಾಗಿದೆ.