ಕಲಬುರಗಿ: ಕೆಲಸ ಮಾಡಿ ಇಲ್ಲವೇ ಜಾಗ ಖಾಲಿ ಮಾಡಿ ಎಂಬ ಸಿದ್ಧರಾಮಯ್ಯ ಹೇಳಿಕೆಗೆ ಬಿ ಸಿ ಪಾಟೀಲ್ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಅವರನ್ನು ಜನ ಜಾಗ ಖಾಲಿ ಮಾಡಿಸಿ ಕಳುಹಿಸಿ ಕೊಟ್ಟಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ನಗರದಲ್ಲಿಂದು ಮಾತನಾಡಿದ ಅವರು, ಇಡೀ ಭಾರತದಲ್ಲಿ ಆಗದೇ ಇರುವಂತಹ ಕೆಲಸ ನಮ್ಮ ಕರ್ನಾಟಕ ಸರ್ಕಾರ ಮಾಡುತ್ತಿದೆ. ಕಾಂಗ್ರೆಸ್ನವರದ್ದು ಕಾಮಾಲೆ ಕಣ್ಣು. ಅವರು ಹಳದಿ ಕನ್ನಡಕ ಹಾಕಿಕೊಂಡಿದ್ದಾರೆ. ಅವರಿಗೆ ಎಲ್ಲವೂ ಹಳದಿಯಾಗಿಯೇ ಕಾಣುತ್ತಿದೆ ಎಂದರು.
ಗುತ್ತಿಗೆದಾರ ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣ ಕಮಿಷನ್ ಆರೋಪಕ್ಕೆ ಪ್ರತಿಕ್ರಿಯಿಸಿ, ಯಾರೋ ಒಬ್ಬ ತಲೆಪಟ್ಟಿ ಇಲ್ಲದವನು ನೀಡುವ ಆಧಾರರಹಿತ ಹೇಳಿಕೆಗೆ ಯಾರೂ ಮಹತ್ವ ಕೊಡಬಾರದು. ಇದು ಕಾಂಗ್ರೆಸ್ ಆಯೋಜಿತ ಕಾರ್ಯಕ್ರಮ. ಸಿದ್ದರಾಮಯ್ಯನವರ ಮನೆಗೆ ಹೋಗಿ ಹೊರಗಡೆ ಬಂದು ಈ ರೀತಿ ಹೇಳಿಕೆ ಕೊಡುತ್ತಾನೆ ಎಂದರೆ ನೀವೇ ಅರ್ಥ ಮಾಡಿಕೊಳ್ಳಿ ಎಂದು ತಿಳಿಸಿದರು.
ಕಳೆದ ಒಂದು ವಾರದಲ್ಲಿ ಸಿದ್ದರಾಮಯ್ಯನವರ ಇಮೇಜ್ ಪೂರ್ತಿ ಡೌನ್ ಆಗಿದೆ. ಅದನ್ನು ಸರಿಪಡಿಸುವುದಕ್ಕೋಸ್ಕರ ಕೆಂಪಣ್ಣನ ಮನೆಗೆ ಕರೆಸಿಕೊಂಡು ಈ ರೀತಿ ಹೇಳಿಕೆ ಕೊಡಿಸಿದ್ದಾರೆ. ಅವನ್ಯಾವ ದೊಡ್ಡ ಘನಂದಾರಿ ಲೀಡರ್?, ಆತನ ಹೇಳಿಕೆಯಲ್ಲಿ ಯಾವುದೇ ಆಧಾರಗಳಿಲ್ಲ. ಆತನ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುತ್ತೇವೆ ಎಂದು ಏಕವಚನದಲ್ಲೇ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:ಕಾಂಗ್ರೆಸ್ ಕುಮ್ಮಕ್ಕಿನಿಂದ ಕೆಂಪಣ್ಣ ಅವರಿಂದ ಕಮಿಷನ್ ಆರೋಪ: ಕಾರಜೋಳ