ಕಲಬುರಗಿ: ಸೀಲ್ ಡೌನ್ ಪ್ರದೇಶದಲ್ಲಿ ಬ್ಯಾರಿಕೇಡ್ ತೆರವು ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡರ ವಿರುದ್ಧ ಚಿತ್ತಾಪುರ ತಾಲೂಕಿನ ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸಂಸದ ಉಮೇಶ್ ಜಾಧವ್ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿ ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪುರಸಭೆ ಸದಸ್ಯ ಶರಣು ನಾಟೀಕಾರ, ವಾಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೆಹಬೂಬ್ ಸಾಹೇಬ್ ಸೇರಿ ಏಳು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಜಿ.ಪಂ. ಸದಸ್ಯ ಅರವಿಂದ ಚವ್ಹಾಣ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಸಂಸದ ಉಮೇಶ್ ಜಾಧವ್ ವಿರುದ್ಧ ಪುರಸಭೆ ಸದಸ್ಯ ಶರಣು ನಾಟೀಕಾರ ದೂರು ನೀಡಿದ್ದರಂತೆ. ಅದನ್ನು ಪೊಲೀಸರು ಪರಿಗಣಿಸದಿರುವುದು ಕಾಂಗ್ರೆಸ್ ಮುಖಂಡರ ಬೇಸರಕ್ಕೆ ಕಾರಣವಾಗಿದೆ ಎನ್ನಲಾಗ್ತಿದೆ. ಮೇ 10ರಂದು ವಾಡಿ ಪಟ್ಟಣದಲ್ಲಿ ನಡೆದ ಘಟನೆ ಇದಾಗಿದೆ.
ಸೀಲ್ಡೌನ್ ಏರಿಯಾದ ಬ್ಯಾರಿಕೇಡ್ ತೆರವಿಗೆ ಸಂಸದ ಉಮೇಶ್ ಜಾಧವ್ ಬಂದಿದ್ದರು. ಇದನ್ನು ಪುರಸಭೆ ಸದಸ್ಯರು ಪ್ರಶ್ನಿಸಿ, ಬ್ಯಾರಿಕೇಡ್ ಬಳಿ ಅಡ್ಡಲಾಗಿ ಕುಳಿತು ವಿರೋಧಿಸಿದ್ದರು. ಸದಸ್ಯರ ವಿರೋಧದ ನಡುವೆಯೇ ಬ್ಯಾರಿಕೇಡ್ ತೆಗೆದು ಸಂಸದರು ವಾಪಸಾಗಿದ್ದರು. ಈ ಘಟನೆ ಈಗ ರಾಜಕೀಯ ಸ್ವರೂಪ ಪಡೆದುಕೊಂಡಿದೆ.