ಕಲಬುರಗಿ: ಕೊರೊನಾ ವಾರಿಯರ್ಸ್ಗಳಾದ ಆಶಾ ಕಾರ್ಯಕರ್ತೆಯರಿಗೆ 12,000 ರೂಪಾಯಿ ಮಾಸಿಕ ವೇತನ ನೀಡುವಂತೆ ಆಗ್ರಹಿಸಿ ಕಲಬುರಗಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಕಣ್ಣಿಗೆ ಕಪ್ಪುಬಟ್ಟೆ ಧರಿಸಿ ಪ್ರತಿಭಟಿಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕರವೇ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೋವಿಡ್ ನಿಯಂತ್ರಣಕ್ಕಾಗಿ ರಾಜ್ಯದಾದ್ಯಂತ ಹಗಲಿರುಳೆನ್ನದೆ ಆಶಾ ಕಾರ್ಯಕರ್ತೆಯರು ಶ್ರಮಿಸುತ್ತಿದ್ದಾರೆ. ಇಂಥ ಸಮಯದಲ್ಲಿ ಅವರ ಬೆನ್ನಿಗೆ ನಿಲ್ಲಬೇಕಾದ ಸರ್ಕಾರ, ಅವರ ಸೇವೆಗೆ ಸೂಕ್ತ ವೇತನ ನೀಡದೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.
ವೈದ್ಯರ ಸಂಬಳ ಹೆಚ್ಚಿಸಿರುವುದನ್ನು ಕರವೇ ಸ್ವಾಗತಿಸುತ್ತೆ. ಆದರೆ, ಆಶಾ ಕಾರ್ಯಕರ್ತೆಯರ ವಿಷಯದಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರುತ್ತಿರುವುದು ತಪ್ಪು ಎಂದು ಆಕ್ರೋಶ ಹೊರ ಹಾಕಿದರು. ಹಾಗೆಯೇ ಕೊರೊನಾ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ₹12,000 ಮಾಸಿಕ ವೇತನ ನೀಡುವಂತೆ ಹಾಗೂ ಕಾರ್ಯಕರ್ತೆಯರ ಇನ್ನಿತರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.