ಕಲಬುರಗಿ: ತಮ್ಮ ಸರ್ಕಾರದಲ್ಲಿ ಮಾಡಬಾರದ ಹಗರಣಗಳನ್ನ ಮಾಡಿ ಈಗ ಬಿಜೆಪಿಯತ್ತ ಬೆರಳು ಮಾಡುತ್ತಿರುವ ಸಿದ್ದರಾಮಯ್ಯನವರ ಮಾತು 'ನೂರು ಇಲಿ ತಿಂದು ಬೆಕ್ಕು ಹಜ್ಗೆ' ಹೋಗಿತ್ತಂತೆ ಹಾಗಿದೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಕಾಲದಲ್ಲೇ ಅತಿ ಹೆಚ್ಚು ಭ್ರಷ್ಟಾಚಾರ ನಡೆದಿದೆ. ಬಡವರ ಆಹಾರ ಧಾನ್ಯ ಹಂಚಿಕೆಯಲ್ಲಿ ಹಗರಣ, ಶಿಕ್ಷಕರ ನೇಮಕಾತಿ, ಪೊಲೀಸ್ ನೇಮಕಾತಿಯಲ್ಲಿ ಹಗರಣ, ಎಸ್ಸಿ ಎಸ್ಟಿ ಅನುದಾನದಲ್ಲಿ ಹಗರಣ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸರ್ಕಾರ ಇದ್ದಾಗ ಹಗರಣಗಳು ನಡೆದಿವೆ. ಸಿದ್ದರಾಮಯ್ಯ ಸರ್ಕಾರವೇ ಹಗರಣಗಳ ಸರ್ಕಾರವಾಗಿತ್ತು. ಈಗ ಬಿಜೆಪಿಯತ್ತ ಬೆರಳು ಮಾಡುತ್ತಿದ್ದಾರೆ ಎಂದು ತೀರುಗೇಟು ನೀಡಿದರು.
ಸಿಎಂ ಬೊಮ್ಮಾಯಿ ಕಾಮನ್ ಮ್ಯಾನ್. ರಾಜ್ಯದ ಸಾಮಾನ್ಯ ಜನರನ್ನು ಪ್ರತಿನಿಧಿಸುತ್ತಿದ್ದಾರೆ. ಮುಖ್ಯಮಂತ್ರಿಗಳ ಗೌರವಕ್ಕೆ ಚ್ಯುತಿ ತರುವುದು ಸಾಮಾನ್ಯ ಮನುಷ್ಯನ ಗೌರವಕ್ಕೆ ಚ್ಯುತಿ ತಂದಂತೆ ಎಂಬುವುದನ್ನು ಮರೆತ ಕಾಂಗ್ರೆಸ್ ಇಲ್ಲಸಲ್ಲದ ಆರೋಪ ಮಾಡುತ್ತಿದೆ. ರಾಜ್ಯದ ಜನತೆಯೇ ಇವರಿಗೆ ತಕ್ಕಪಾಠ ಕಲಿಸಲಿದ್ದಾರೆ ಎಂದು ಕಿಡಿಕಾರಿದರು.
ಇನ್ನು ಬಿಜೆಪಿಯಲ್ಲಿ ಒಳಜಗಳವಿಲ್ಲ. ಕೆಲ ಶಾಸಕರಿಗೆ ಏನಾದರೂ ಅಸಮಧಾನ ಇರಬಹುದೇ ಹೊರತು ಜಗಳ ಆಗಲ್ಲ. ನಿಜವಾದ ಜಗಳ ಇರುವುದು ಕಾಂಗ್ರೆಸ್ನಲ್ಲಿ. ಈಗ ರಾಜ್ಯಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ಹಾಗೂ ಸಚಿನ್ ಪೈಲಟ್ ಮಧ್ಯೆ ಜಗಳ ನಡೆದಿದೆ. ಅದೇ ರೀತಿ ಮುಂದೆ ಕರ್ನಾಟಕದಲ್ಲಿ ಇಬ್ಬರು ನಾಯಕರು ಜಗಳ ಆಡಲಿದ್ದಾರೆ ಎಂದು ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಹೆಸರು ಪ್ರಸ್ತಾಪ ಮಾಡದೆ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಬೊಮ್ಮಾಯಿ ಇಸ್ ಹೆಡ್ ಆಫ್ ದಿ ಗವರ್ನಮೆಂಟ್.. ಜಾತಿಗೂ ಭ್ರಷ್ಟಾಚಾರಕ್ಕೂ ಏನು ಸಂಬಂಧ: ಸಿದ್ದರಾಮಯ್ಯ ವಾಗ್ದಾಳಿ