ಕಲಬುರಗಿ: ಲಾಕ್ಡೌನ್ನಿಂದ ರಾಜಸ್ಥಾನದ ಕೋಟಾದಲ್ಲಿ ಸಿಲುಕಿರುವ ನಮ್ಮ ಮಕ್ಕಳನ್ನು ವಾಪಸ್ ಮನೆಗೆ ಕರೆಸಿಕೊಡಿ ಅಂತಾ ಜಿಲ್ಲೆಯಲ್ಲಿ ಪೋಷಕರು ಕಣ್ಣೀರಿಡುತ್ತ ಸರ್ಕಾರಕ್ಕೆ ಅಂಗಲಾಚುತ್ತಿದ್ದಾರೆ.
ಐಐಟಿ, ನೀಟ್ ಕೋಚಿಂಗ್ಗಾಗಿ ರಾಜಸ್ಥಾನದ ಕೋಟಾಗೆ ಜಿಲ್ಲೆಯಿಂದ ಸುಮಾರು 10 -12 ಜನ ವಿದ್ಯಾರ್ಥಿಗಳು ತೆರಳಿದ್ದಾರೆ. ಕೊರೊನಾ ವೈರಸ್ ತಡೆಗಟ್ಟಲು ಲಾಕ್ಡೌನ್ ಮಾಡಿರುವ ಕಾರಣ ವಿದ್ಯಾರ್ಥಿಗಳು ವಾಪಸ್ ಮನೆಗೆ ಬರಲಾಗದೇ ಕೋಟಾದಲ್ಲಿಯೇ ಸಿಲುಕಿದ್ದಾರೆ.
ಇದೇ ರೀತಿ ರಾಜ್ಯದಿಂದ ಸುಮಾರು 250 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೋಟಾ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ಸ್ಟ್ರಕ್ ಆಗಿದ್ದಾರೆ. ಲಾಕ್ಡೌನ್ನಿಂದ ಊಟ ಸೇರಿದಂತೆ ಹಲವು ಸಮಸ್ಯೆಗಳನ್ನು ವಿದ್ಯಾರ್ಥಿಗಳು ಅನುಭವಿಸುತ್ತಿದ್ದು, ಕೋಟಾದಲ್ಲಿ ಮಹಾಮಾರಿ ಕೊರೊನಾ ಆರ್ಭಟ ಹೆಚ್ಚಿದ್ದು, ಮಕ್ಕಳಿಗೆ ವೈರಸ್ ಅಂಟುವ ಆತಂಕವನ್ನು ಪೋಷಕರು ವ್ಯಕ್ತಪಡಿಸುತ್ತಿದ್ದಾರೆ.
ರಾಜಸ್ಥಾನ ಸರ್ಕಾರ ನಮ್ಮ ಮಕ್ಕಳನ್ನು ಮನೆಗೆ ಕಳಿಸಿಕೊಡಲು ಸಿದ್ದವಿದೆ. ರಾಜ್ಯ ಸರ್ಕಾರ ಪಾಸ್, ಸಾರಿಗೆ ವ್ಯವಸ್ಥೆ ಕಲ್ಪಿಸಿ ನಮ್ಮ ಮಕ್ಕಳನ್ನು ವಾಪಸ್ ಕರೆಸಿಕೊಳ್ಳಬೇಕೆಂದು ಪೋಷಕರು ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ.