ಕಲಬುರಗಿ: ಲಿಂಗಾಯತ ಭವನ ನಿರ್ಮಾಣದಲ್ಲಿ ಅಕ್ರಮ ನಡೆದಿದೆ. ಈ ಬಗ್ಗೆ ಸಾಕಷ್ಟು ದೂರು ಕೊಟ್ಟರೂ ಕ್ರಮ ಕೈಗೊಳ್ಳದ ಡಿಸಿ ಮತ್ತು ಜಿಲ್ಲಾ ಪಂಚಾಯತ್ ಸಿಇಒ ಬಳೆ ತೊಟ್ಟುಕೊಳ್ಳಬೇಕು ಎಂದು ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.
ಕಲಬುರಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆಳಂದದಲ್ಲಿ ಲಿಂಗಾಯತ ಭವನ ನಿರ್ಮಾಣಕ್ಕೆ ಮಂಜೂರು ಮಾಡಲಾದ ಹಣವನ್ನು ಅಖಿಲ ಭಾರತ ವೀರಶೈವ ಮಹಾಸಭಾ ಟ್ರಸ್ಟ್ನಿಂದ ಕಟ್ಟಡದ ನಿರ್ಮಾಣದಲ್ಲಿ ಮಾರ್ಗಸೂಚಿ ಮತ್ತು ಷರತ್ತುಗಳ ಉಲ್ಲಂಘನೆ ಮಾಡಲಾಗಿದೆ. ಮೊದಲ ಕಂತಿನಲ್ಲಿ 25 ಲಕ್ಷ ರೂ. ಬಿಡುಗಡೆ ಮಾಡಿದರೂ ಲಿಂಗಾಯತ ಭವನ ನಿರ್ಮಿಸದೇ ಆ ಸ್ಥಳದಲ್ಲಿ ವಾಣಿಜ್ಯ ಮಳಿಗೆ ನಿರ್ಮಾಣ ಮಾಡಲಾಗಿದೆ. ಭವನ ನಿರ್ಮಿಸದೇ ಇದ್ದರೂ ಬಿಸಿಎಂ ಜಿಲ್ಲಾಧಿಕಾರಿ ರಮೇಶ್ ಸಂಗಾ 2ನೇ ಕಂತಾಗಿ 50 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ಆರೋಪಿಸಿದರು.
ಒಟ್ಟು ಲಿಂಗಾಯತ ಭವನ ನಿರ್ಮಾಣದಲ್ಲಿ 75 ಲಕ್ಷ ರೂ. ಅನುದಾನ ದುರ್ಬಳಕೆ ಮಾಡಲಾಗಿದೆ. ಈ ಕುರಿತು ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳದಿರೋದನ್ನ ನೋಡಿದ್ರೆ ಅನುಮಾನ ಸೃಷ್ಟಿಯಾಗುತ್ತಿದೆ. ಅಕ್ರಮದಲ್ಲಿ ಜಿಲ್ಲಾಧಿಕಾರಿ ರಮೇಶ್ ಸಂಗಾ ಕೈವಾಡವಿರುವುದಾಗಿ ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ಇಷ್ಟಾದರೂ ಹಿರಿಯ ಅಧಿಕಾರಿಗಳು, ಶಾಸಕರು, ಸಂಸದರೂ ಚಕಾರ ಎತ್ತದಿರುವುದು ನೋಡಿದ್ರೆ ಸಂಗಾ ಅವರಿಗೆ ಹೆದರಿ ಕೂತಿದಾರೆ ಎಂಬ ಅನುಮಾನ ಹುಟ್ಟಿಕೊಳ್ಳುತ್ತಿದೆ. ಕೂಡಲೇ ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿ ರಮೇಶ್ ಸಂಗಾ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಅವರನ್ನು ಅಧಿಕಾರದಿಂದ ವಜಾಗೊಳಿಸುವಂತೆ ಹಾಗೂ ದುರ್ಬಳಕೆಯಾದ ಹಣವನ್ನು ಬಡ್ಡಿ ಸಮೇತ ವಸೂಲಿ ಮಾಡುವಂತೆ ಆಗ್ರಹಿಸಿದರು.
ಮಾಜಿ ಶಾಸಕ ಬಿಆರ್ ಪಾಟೀಲ್ ವಿರುದ್ಧ ಕಿಡಿ:
ಮಾಜಿ ಶಾಸಕ ಬಿ.ಆರ್.ಪಾಟೀಲ್ ಅಖಿಲ ಭಾರತ ವೀರಶೈವ ಮಹಾ ಸಭಾ ಟ್ರಸ್ಟ್ ಅಧ್ಯಕ್ಷರಾಗಿದ್ದು, ತಮ್ಮ ಪ್ರಭಾವ ಬಳಸಿ ಕಾನೂನುಬಾಹಿರ ಕೆಲಸ ಮಾಡುತ್ತಿದ್ದಾರೆ ಎಂದು ಆಂದೋಲಶ್ರೀ ಕಿಡಿಕಾರಿದರು.
ಸಂಬಂಧಪಟ್ಟ ಇಲಾಖೆ ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಕಾನೂನು ಕ್ರಮ ಕೈಗೊಳದಿದ್ದರೆ ಶ್ರೀರಾಮಸೇನೆ ಸುಮ್ಮನೇ ಕೂಡಲ್ಲ, ಮುಂಬರುವ ದಿನಗಳಲ್ಲಿ ಪೊಲೀಸ್ ಕಮಿಷನರ್ ಕಚೇರಿ ಎದುರು ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸೋದಾಗಿ ಎಚ್ಚರಿಸಿದರು.