ಕಲಬುರಗಿ : ಜಿಲ್ಲೆಯ ಆಳಂದ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರಲ್ಲಿ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ. ಮೃತ ಬಾಲಕಿಯ ಮನೆಗೆ ಚಿತ್ರನಟ ಚೇತನ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ವೈಯಕ್ತಿಕವಾಗಿ ಆರ್ಥಿಕ ಧನ ಸಹಾಯ ಮಾಡಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಳಂದ ತಾಲೂಕಿನ 14 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ. ಇದು ಕರ್ನಾಟಕದ ಜನತೆಗೆ ಬಹಳ ನೋವುಂಟು ಮಾಡಿದೆ. ಪೈಶಾಚಿಕ ಕೃತ್ಯದಿಂದ ಮೃತಳಾದ ಬಾಲಕಿ ಒಂದು ಕುಟುಂಬದ ಮಗಳಲ್ಲ, ಇಡೀ ಕರ್ನಾಟಕದ ಮಗಳು. ಇಂತಹ ಪ್ರಕರಣ ನಡೆದಾಗ ಜಾತಿ ಲೇಪನ ಮಾಡುವ ಕೆಲಸವಾಗುತ್ತದೆ. ಆದಾಗ್ಯೂ, ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲರೂ ಬಾಲಕಿ ಪರವಾಗಿ ನಿಂತಿದ್ದಾರೆ. ಜಾತಿಗೆ ಸೀಮಿತವಾಗಿಲ್ಲ ಎಂದು ಹೇಳಿದರು.
ಕೇರಳದಂತೆ ಕರ್ನಾಟಕದಲ್ಲಿಯೂ ಶಾಲಾ ಪಠ್ಯಕ್ರಮದಲ್ಲಿ ಲಿಂಗ ಸಮಾನತೆ ಶಿಕ್ಷಣ ನೀಡಬೇಕು. ಆಗ ಇಂತಹ ಹೇಯ ಕೃತ್ಯಗಳನ್ನ ತಡೆಯಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಕೇರಳ ರಾಜ್ಯದಲ್ಲಿ ಲಿಂಗ ಸಮಾನತೆ ತರಗತಿಗಳನ್ನು ಹೇಳಿಕೊಡುತ್ತಿದ್ದಾರೆ. ಅದೇ ರೀತಿ ನಮ್ಮ ರಾಜ್ಯದಲ್ಲಿಯೂ ಸಹ ಮೃತ ಬಾಲಕಿಯ ಹೆಸರಿನಲ್ಲಿ ಲಿಂಗ ಸಮಾನತೆ ಕುರಿತು ಪಠ್ಯಕ್ರಮ ಅಳವಡಿಸಬೇಕು. ಈ ಹಿನ್ನೆಲೆ ಅಭಿಯಾನ ಆರಂಭಿಸಲಾಗುತ್ತದೆ ಎಂದರು.
ಇದನ್ನೂ ಓದಿ: ಒಬ್ಬ ಬಾಲಕ ಅತ್ಯಾಚಾರ ಕೊಲೆ ಮಾಡೋದು ಅಸಾಧ್ಯ: ಆರೋಪಿಗಳ ಬಂಧನಕ್ಕೆ ಮಹಿಳೆಯರ ಆಗ್ರಹ
ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಸುಲಭ ಶೌಚಾಲಯಗಳ ಕೊರತೆ ಇದೆ. ಇದರಿಂದಾಗಿ ಗ್ರಾಮೀಣ ಪ್ರದೇಶದಲ್ಲಿನ ಮಹಿಳೆಯರು ಬಹಿರ್ದೆಸೆಗೆ ಹೋಗುವುದು ಅನಿವಾರ್ಯವಾಗುತ್ತಿದೆ. ಸ್ವಚ್ಛ ಭಾರತ್ ಅಭಿಯಾನದ ಉದ್ದೇಶ ಇನ್ನೂ ಸಂಪೂರ್ಣವಾಗಿ ಸಾಕಾರಗೊಂಡಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ಕಲಬುರಗಿ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣ: ಅಪ್ರಾಪ್ತ ಆರೋಪಿ ಅರೆಸ್ಟ್