ಕಲಬುರಗಿ: ಚಿಕನ್ ಊಟ ಕೊಡದಿದ್ದಕ್ಕೆ ಕೋಪಗೊಂಡ ಕ್ವಾರಂಟೈನ್ನಲ್ಲಿ ಇರುವ ವ್ಯಕ್ತಿಯೊಬ್ಬ ಆಶಾ ಕಾರ್ಯಕರ್ತೆಯ ಮೇಲೆ ಹಲ್ಲೆ ಮಾಡಿರುವ ಘಟನೆ ಆಳಂದ ತಾಲೂಕಿನ ಕಿಣ್ಣಿ ಅಬ್ಬಾಸ್ ಗ್ರಾಮದಲ್ಲಿ ನಡೆದಿದೆ.
ಆಶಾ ಕಾರ್ಯಕರ್ತೆ ರೇಣುಕಾ ಕುಡಕಿ ಎಂಬುವರ ಮೇಲೆ ಸೋಮನಾಥ್ ಕಾಂಬಳೆ ಎಂಬಾತ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ರೇಣುಕಾ ಅವರ ಕೈ ಮೂಳೆ ಮುರಿದಿದ್ದು, ಆಳಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮುಂಬೈನಿಂದ ಬಂದಿದ್ದ ಸೋಮನಾಥನನ್ನು ಆಶಾ ಕಾರ್ಯಕರ್ತೆ ಗ್ರಾಮದ ಸರ್ಕಾರಿ ಶಾಲೆಯ ಕ್ವಾರಂಟೈನ್ ಕೇಂದ್ರಕ್ಕೆ ಸೇರಿಸಿದ್ದರು. ಮರುದಿನ ಕ್ವಾರಂಟೈನ್ ಕೇಂದ್ರದತ್ತ ತೆರಳಿ ಆಶಾ ಕಾರ್ಯಕರ್ತೆಯನ್ನು ಕರೆದು ಊಟಕ್ಕೆ ಚಿಕನ್ ಬೇಕು, ಮಕ್ಕಳಿಗೆ ಚಿಪ್ಸ್ ಬೇಕೆಂಬ ಬೇಡಿಕೆ ಇಟ್ಟಿದ್ದಾನೆ. ಆದರೆ, ಆಹಾರ ಸರಬರಾಜು ನನ್ನ ಕೆಲಸವಲ್ಲ, ಅಧಿಕಾರಿಗಳ ಗಮನಕ್ಕೆ ತರುವುದಾಗಿ ಆಶಾ ಕಾರ್ಯಕರ್ತೆ ಹೇಳಿದ್ದಾರೆ.
ಇಷ್ಟಕ್ಕೆ ಕೋಪಗೊಂಡ ಸೋಮನಾಥ, ಆಶಾ ಕಾರ್ಯಕರ್ತೆ ಮೇಲೆ ಹಲ್ಲೆ ಮಾಡಿದ್ದಾನೆ. ಇದಕ್ಕೆ ಆತನ ಕುಟುಂಬಸ್ಥರು ಸಾಥ್ ನೀಡಿದ್ದಾರೆ ಎಂದು ಆರೋಪಿಸಿ ಸೋಮನಾಥನ ಹೆಂಡತಿ ಸೇರಿ ಕುಟುಂಬದ ಐವರು ಸದಸ್ಯರ ಮೇಲೆ ರೇಣುಕಾ ದೂರು ನೀಡಿದ್ದಾರೆ. ಮಾದನ ಹಿಪ್ಪರಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.