ಕಲಬುರಗಿ: ಘತ್ತರಗಿ ಭಾಗಮ್ಮ ದೇವಿ ದರ್ಶನಕ್ಕೆಂದು ಆಗಮಿಸಿದ್ದ ಬೆಂಗಳೂರು ಮೂಲದ ವ್ಯಕ್ತಿಯೋರ್ವ ಅಫಜಲಪುರ ತಾಲೂಕಿನ ಭೀಮಾ ನದಿ ನೀರಿನಲ್ಲಿ ಕೊಚ್ಚಿಕೊಂಡು ಹೋದ ಘಟನೆ ಸೋಮವಾರ ನಡೆದಿದೆ. ಸುರೇಶ್ (40) ಕೊಚ್ಚಿಹೋದ ವ್ಯಕ್ತಿ.
ಅಫಜಲಪುರ ತಾಲೂಕಿನ ಘತ್ತರಗಿ ಭಾಗಮ್ಮ ದೇವಿ ದರ್ಶನಕ್ಕೆಂದು ಕುಟುಂಬ ಸಮೇತರಾಗಿ ಬೆಂಗಳೂರಿನ ಜೆಸಿ ನಗರ ನಿವಾಸಿಯಾದ ಸುರೇಶ ಆಗಮಿಸಿದ್ದರು. ದರ್ಶನಕ್ಕೂ ಮುನ್ನ ಘತ್ತರಗಿ ಬಳಿ ಇರುವ ಭೀಮಾ ನದಿಯಲ್ಲಿ ಸ್ನಾನ ಮಾಡಲೆಂದು ಇಳಿದಾಗ ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಸುರೇಶ್ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ನದಿ ತಟದಲ್ಲಿ ಸುರೇಶ್ ಅವರ ಹೆಂಡತಿ, ಮಕ್ಕಳು ಕಣ್ಣೀರಿಡುತ್ತಿರುವ ದೃಶ್ಯ ಮನಕಲಕುವಂತಿತ್ತು. ಈ ಕುರಿತು ಅಫಜಲಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ಓದಿ: ಹಳ್ಳದಲ್ಲಿ ಸಿಲುಕಿಕೊಂಡ ಟ್ರ್ಯಾಕ್ಟರ್, ಕಾರ್ಮಿಕರು ಅಪಾಯದಿಂದ ಪಾರು)