ಕಲಬುರಗಿ : ಮೋದಿ, ಶಾ, ಆರ್‌ಎಸ್‌ಎಸ್ ಅವರ ಕುತಂತ್ರದಿಂದ ನಾನು ಸೋತಿದ್ದೇನೆಯೇ ಹೊರೆತು ಕಲಬುರಗಿ ಜನ ನನ್ನನ್ನ ಸೋಲಿಸಿಲ್ಲ ಎಂದು ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ನಗರದ ಜೈಭವಾನಿ ಕನ್ವೆನ್ಷನ್ ಹಾಲ್‌ನಲ್ಲಿ ಆಯೋಜಸಿದ್ದ ಅಭಿನಂದನಾ ಸಮಾರಂಭದಲ್ಲಿ ಕಾಂಗ್ರೆಸ್ ನಾಯಕರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಒಂದು ವರ್ಷ ನಾಲ್ಕು ತಿಂಗಳ ಬಳಿಕ ನಾನು ಪವಿತ್ರವಾದ ಕಲಬುರಗಿ ಭೂಮಿ ಮೇಲೆ ಕಾಲಿಟ್ಟಿದ್ದೇನೆ. ಕೋವಿಡ್ ಕಾರಣ ಸ್ಥಳೀಯ ಶಾಸಕರು, ಮುಖಂಡರು ಕಲಬುರಗಿಗೆ ಬರಲು ಬೇಡ ಎಂದಿದಕ್ಕೆ ನಾನು ಬರಲು ತಡ ಮಾಡಿದೆ ಎಂದರು.
ಕೋವಿಡ್ ಇಡೀ ದೇಶಕ್ಕಲ್ಲದೆ, ಇಡೀ ವಿಶ್ವಕ್ಕೆ ಕಾಡಿದೆ. ಕೋವಿಡ್‌ನಿಂದ ಲಕ್ಷಾಂತರ ಜನ ಮೃತಪಟ್ಟಿದ್ದಾರೆ. ನಾನು ಜನರಿಂದ ದೂರ ಇರುವ ವ್ಯಕ್ತಿ ಅಲ್ಲ. ಕೋವಿಡ್ ಕಾರಣದಿಂದ ದೂರ ಉಳಿಬೇಕಾದ ಅನಿವಾರ್ಯತೆ ಎದುರಾಯಿತು. ಜನರ ಆಶೀರ್ವಾದ, ಸಂಪರ್ಕ ಇಲ್ಲದೆ ನಾನು ಬದುಕೋದು ಕಷ್ಟ. ಕಲಬುರಗಿಯ ಜನ ನನ್ನ 11 ಬಾರಿ ಗೆಲ್ಲಿಸಿದ್ದಾರೆ. ಯಾವುದೋ ಕಾರಣಕ್ಕೆ ನನಗೆ ಸೋಲಾಗಿದೆ ಎಂದು ಖರ್ಗೆ ಅಭಿಪ್ರಾಯಪಟ್ಟರು.
ಪಾರ್ಲಿಮೆಂಟ್‌ನಲ್ಲಿ ಸೋಲಿಸೋದಾಗಿ ನನಗೆ ವಾರ್ನಿಂಗ್ ಕೊಟ್ಟಿದ್ದರು. ಮೋದಿ, ಶಾ, ಆರ್‌ಎಸ್‌ಎಸ್ ಅವರ ಕುತಂತ್ರದಿಂದ ನಾನು ಸೋತಿದ್ದೇನೆ. ನನಗೆ ಕಲಬುರಗಿ ಜನ ಸೋಲಿಸಿಲ್ಲ. ಇವತ್ತು ಸಂವಿಧಾನದ ಹಕ್ಕು ಕಸಿಯಲಾಗ್ತಿದೆ. ಕೇಂದ್ರದಲ್ಲಿ ಹಿಂದುಳಿದ, ಅಲ್ಪಸಂಖ್ಯಾತರಿಗೆ ಮಂತ್ರಿಗಿರಿ ಕೊಟ್ಟಿದ್ದೀವಿ ಅಂತಾ ಹೇಳ್ತಾರೆ. ಆದ್ರೆ, ಮಂತ್ರಿಗಳಿಗೆ ಅಧಿಕಾರ ಕೊಟ್ಟಿಲ್ಲ, ಕೇವಲ ಹೀಗಂತಾ, ಬೋರ್ಡ್ ಹಾಕಿಕೊಂಡು ಓಡಾಡಬೇಕು. ಹೊಸದು ಏನು ಕೋಡೊದಿಲ್ಲ, ಇದ್ದಿದನ್ನು ಕಿತ್ತುಕೊಂಡು ಹೋಗೋದು ಮೋದಿ ಸರ್ಕಾರದ ಕೆಲಸ. 70 ವರ್ಷದಲ್ಲಿ ಕಾಂಗ್ರೆಸ್ ಏನು ಮಾಡಿದೆ ಅಂತಾ ಬಿಜೆಪಿ, ಮೋದಿ ಕೇಳ್ತಾರೆ. ನಾವು ಮಾಡಿದ್ದೇವೆ ಅಂತಾ ಇವತ್ತು ನೀವು ಜೀವಂತ ಇದ್ದೀರಿ ಎಂದು ಪ್ರಧಾನಿ ಮೋದಿಗೆ ಮಲ್ಲಿಕಾರ್ಜುನ ಖರ್ಗೆ ಟಾಂಗ್ ಕೊಟ್ಟರು.
ಬಿಜೆಪಿ ಹೆಸರು ಬದಲಿಸುತ್ತಿದೆ ಅಷ್ಟೇ.. : ಈಗ ನರೇಂದ್ರ ಮೋದಿ ಅವರು ಹೊಸ ಆಟ ಆರಂಭಿಸಿದ್ದಾರೆ. ನಾವೇನು ಮಾಡುತ್ತೇವೆ ಅದರ ಹೆಸರನ್ನು ಬದಲಾವಣೆ ಮಾಡ್ತಾ ಹೋಗ್ತಿದ್ದಾರೆ ಅಷ್ಟೇ.. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಇತ್ತು. ಇವತ್ತು ತೈಲ ಬೆಲೆ ಏರಿಕೆ ಆಗಿದೆ. ತೈಲ ಬೆಲೆ ಏರಿಕೆಯಿಂದ 7 ವರ್ಷದಲ್ಲಿ 25 ಲಕ್ಷ ಕೋಟಿ ಆದಾಯ ಆಗಿದೆ ಕೇಂದ್ರ ಸರ್ಕಾರಕ್ಕೆ. 1 ಲಕ್ಷ 35 ಸಾವಿರ ಕೋಟಿ ಮಾತ್ರ ಸಾಲ ಇತ್ತು. ಅದನ್ನು ತೀರಿಸಬಹುದಿತ್ತಲ್ಲ, ಅದನ್ನು ಬಿಟ್ಟು ಮೋದಿ ಬರೀ ಸುಳ್ಳು ಹೇಳ್ತಿದ್ದಾರೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ 7 ಕೋಟಿ ಜನ ನಿರುದ್ಯೋಗಿಗಳಾಗಿದ್ದಾರೆ. ಸಾರ್ವಜನಿಕ ಉದ್ಯಮಗಳಲ್ಲಿ ನೌಕರಿಗಳನ್ನು ಕಡಿಮೆ ಮಾಡ್ತಿದ್ದಾರೆ. ಕೇಂದ್ರ ಸರ್ಕಾರ ಉದ್ಯೋಗವನ್ನು ಸಂಪೂರ್ಣ ಕಡಿಮೆ ಮಾಡ್ತಿದೆ. ಒಂದೆಡೆ ಉದ್ಯೋಗ ಕೊಡ್ತಿವಿ ಅಂತ್ಹೇಳಿ, ಇನ್ನೊಂದೆಡೆ ಉದ್ಯೋಗ ಕಡಿತ ಮಾಡ್ತಿದ್ದಾರೆ. 3 ಕೋಟಿ ಉದ್ಯೋಗಗಳನ್ನು ಕಡಿತ ಮಾಡಿದೆ ಕೇಂದ್ರ ಸರ್ಕಾರ ಎಂದು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ದೇಶವನ್ನು ಅಂಬಾನಿ, ಅದಾನಿ ಅವರ ಕೈಗೆ ಕೊಟ್ಟಿದ್ದಾರೆ. ದೇಶಕ್ಕೆ ಹಾಳು ಮಾಡುವ ಸರ್ಕಾರ ಬಂದಿದ್ರೆ ಅದು ಬಿಜೆಪಿ ಸರ್ಕಾರ. ರೈತರಿಗೆ ಮಾರಕವಾಗುವ ಮೂರು ಕೃಷಿ ಕಾಯ್ದೆಗಳನ್ನು ಜಾರಿಗೆ ತಂದ್ರು. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದರು. ಪಬ್ಲಿಕ್ ಸೆಕ್ಟರ್‌ಗಳನ್ನು ಖಾಸಗಿಕರಣ ಮಾಡ್ತಿದ್ದಾರೆ. ಪಬ್ಲಿಕ್ ಸೆಕ್ಟರ್ ಶಕ್ತಿ ಕಡಿಮೆ ಮಾಡಿ, ನಷ್ಟ ತೋರಿಸಿ ಅಂಬಾನಿ, ಅದಾನಿ ಕೈಯಲ್ಲಿ ಕೊಡ್ತಿದ್ದಾರೆ. 7 ವರ್ಷದಲ್ಲಿ ಬಿಜೆಪಿ ಸರ್ಕಾರ ದೇಶವನ್ನು ಬರ್ಬಾದ್ ಮಾಡಿದೆ. ಬಸವಣ್ಣ, ಅಂಬೇಡ್ಕರ್ ತತ್ವಕ್ಕೆ ಹೊಡೆತ ಬೀಳುತ್ತಿದೆ.
ಸುಳ್ಳು ಹೇಳೋರನ್ನ ನಂಬ್ತೀರಿ, ನಾ ಸತ್ಯ ಹೇಳೋದನ್ನ ನಂಬೋದಿಲ್ವಾ?: ಸುಳ್ಳು ಹೇಳೋರನ್ನ ನಂಬ್ತೀರಿ, ನಾ ಸತ್ಯ ಹೇಳೋದನ್ನ ನಂಬೋದಿಲ್ವಾ?. ನನ್ನ ಉಸಿರಿರೋವರೆಗೂ ನಾನು ರಾಜಕೀಯದಲ್ಲಿ ಮುಂದುವರೆಯುತ್ತೇನೆ, ಹೋರಾಟ ಮಾಡುತ್ತೇನೆ. ನಾನು ನಂಬಿರುವ ತತ್ವ, ಸಿದ್ಧಾಂತಗಳನ್ನ ಅನುಷ್ಠಾನಕ್ಕೆ ತರೋದೆ ನನ್ನ ಮುಖ್ಯ ಧೇಯ. ಆದ್ರೆ, ಎಂಎಲ್ಎ, ಎಂಪಿ ಆಗಬೇಕು ಅನ್ನೋ ಆಸೆ ಇಲ್ಲ. ಜನರ ಮೇಲೆ ಕಾಳಜಿ ಇಟ್ಟು ಕಾಂಗ್ರೆಸ್ ಪಕ್ಷ ಕೆಲಸ ಮಾಡಿದೆ. ಸಂವಿಧಾನ ಇರೋವರೆಗೆ ಕಲಂ 371 ಜೆ ಇರುತ್ತದೆ ಎಂದರು.
ಬಿಜೆಪಿಯಲ್ಲಿ ದೇಶಕ್ಕಾಗಿ ಯಾರು ಪ್ರಾಣ ಕೊಟ್ಟಿದ್ದಾರಾ?: ಮೋದಿ ನಿಮಗೆ ಫ್ರೀಡಂ ಕೊಟ್ಟಿಲ್ಲ, ಆದ್ರೂ ಮೋದಿ ಮೋದಿ ಅಂತೀರಾ?. ಮೋದಿ ಸರ್ಕಾರ ಕೆಟ್ಟ ಸರ್ಕಾರ. ನಾನು ಸಾಯೋವರೆಗೂ ಹೋರಾಟ ಮಾಡುತ್ತೇನೆ. ನಮ್ಮಲ್ಲಿ ಇಂದಿರಾ ಗಾಂಧಿ, ರಾಜೀವ್ ಗಾಂದಿ ಪ್ರಾಣ ಕೊಟ್ಟರು. ನಿನ್ನಲ್ಲಿ ಯಾರಾದ್ರು ದೇಶಕ್ಕಾಗಿ ಪ್ರಾಣ ಕೊಟ್ಟಿದ್ದಾರಾ? ಎಂದು ಬಿಜೆಪಿಗೆ ಖರ್ಗೆ ಪ್ರಶ್ನೆ ಮಾಡಿದ್ದಾರೆ. ಕಾಂಗ್ರೆಸ್ ಅನ್ನು ಯಾರೂ ಮುಗಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ದೇಶದ ಜನರನ್ನು ರಕ್ಷಣೆ ಮಾಡಲು ಇದೆ. ಕಾಂಗ್ರೆಸ್ ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗಲು ಇದೆ. ಬಿಜೆಪಿಯವರು ಹೇಳೋದು ಒಂದು, ಮಾಡೋದೇ ಇನ್ನೊಂದು ಎಂದು ಹಿಂದಿ ಶಾಯರಿ ಹೇಳುವ ಮೂಲಕ ಬಿಜೆಪಿಗೆ ಮಲ್ಲಿಕಾರ್ಜುನ ಖರ್ಗೆ ತಿವಿದರು.
ಹೂಮಳೆಗೈದು ಅದ್ದೂರಿ ಸ್ವಾಗತ : ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಬಳಿಕ ಮೊದಲ ಬಾರಿಗೆ ಕಲಬುರಗಿಗೆ ಆಗಮಿಸಿದ ಕಾಂಗ್ರೆಸ್ ರಾಷ್ಟ್ರನಾಯಕ ಮಲ್ಲಿಕಾರ್ಜುನ ಖರ್ಗೆಗೆ ಜೆಸಿಬಿ ಹಾಗೂ ಕ್ರೇನ್ ಮೂಲಕ ಹೂವಿನ ಸುರಿಮಳೆಗೈದು ಅದ್ದೂರಿಯಾಗಿ ಸ್ವಾಗತಿಸಿದರು.
ಕಲಬುರಗಿ ನಗರದ ವಿಮಾನದ ನಿಲ್ದಾಣಕ್ಕೆ ಬಂದಿಳಿದ ಖರ್ಗೆ ಅವರನ್ನು ಕಲಬುರಗಿ, ಯಾದಗಿರಿ, ಬೀದರ್ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಹಾಲಿ, ಮಾಜಿ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ಅದ್ದೂರಿಯಾಗಿ ಬರಮಾಡಿಕೊಂಡರು. ಇನ್ನು, ವಿಮಾನ ನಿಲ್ದಾಣದಿಂದ ನಗರದ ಜೈಭವಾನಿ ಕನ್ವೆನ್ಷನ್ ಹಾಲ್‌ವರೆಗೆ ತೆರೆದ ವಾಹನದಲ್ಲಿ ಬೃಹತ್ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ರಸ್ತೆಯುದ್ದಕ್ಕೂ ಜೆಸಿಬಿ ಹಾಗೂ ಕ್ರೇನ್‌ನಿಂದ ಹೂಮಳೆಗೈಯಲಾಯಿತು.