ಕಲಬುರಗಿ: 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕೇಂದ್ರಬಿಂದುವಾದ ಸಮ್ಮೇಳನಾಧ್ಯಕ್ಷರ ಭವ್ಯ ಮೆರವಣಿಗೆಯಲ್ಲಿ, ನಾಡಿನ ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ರಾಜ್ಯದ ಸುಮಾರು 60 ಕಲಾ ತಂಡಗಳು ಭಾಗವಹಿಸಲಿವೆ ಎಂದು ಸಮ್ಮೇಳನದ ಮೆರವಣಿಗೆ ಸಮಿತಿಯ ಅಧ್ಯಕ್ಷರಾಗಿರುವ ಸೇಡಂ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್ ತಿಳಿಸಿದ್ದಾರೆ. 60 ಕಲಾ ತಂಡಗಳ 23 ಕಲಬುರಗಿ ಕಲಾ ತಂಡಗಳಿಗೆ ಅವಕಾಶ ನೀಡುವ ಮೂಲಕ, ಜಿಲ್ಲೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ ಎಂದರು.
ಯಕ್ಷಗಾನ, ಡೊಳ್ಳು ಕುಣಿತ, ಕರಡಿ ಮಜಲು, ಲಂಬಾಣಿ ಕುಣಿತ, ಹಲಿಗೆ ವಾದನ ಹೀಗೆ ಎಲ್ಲಾ ಪ್ರಕಾರದ ಕಲಾ ತಂಡಗಳು ಭಾಗವಹಿಸಿ ಮೆರವಣಿಗೆಗೆ ರಂಗು ತರಲಿವೆ. ಹೊರ ಜಿಲ್ಲೆಯ ಕಲಾವಿದರಿಗೆ ಸೂಕ್ತ ಊಟೋಪಚಾರ, ಸಾರಿಗೆ, ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಇದಲ್ಲದೆ ಮೆರವಣಿಗೆಯಲ್ಲಿ ಭಾಗವಹಿಸುವ ಕಲಾವಿದರಿಗೆ ಪ್ರಶಸ್ತಿ ಪತ್ರ, ಸ್ಮರಣ ಸಂಚಿಕೆ ನೀಡಲಾಗುವುದು ಎಂದು ಅವರು ತಿಳಿಸಿದರು. ಮೆರವಣಿಗೆಯಲ್ಲಿ ಸುಮಾರು 3 ರಿಂದ 5 ಸಾವಿರ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಜಿಲ್ಲೆಯ ಉದ್ಯಮಿಗಳು, ಕನ್ನಡಪರ ಹೋರಾಟಗಾರು ಭಾಗವಹಿಸಲಿದ್ದಾರೆ. ಸೂಫಿ, ಸಂತರ ನಾಡು ಇದಾಗಿರುವುದರಿಂದ ಧರ್ಮ ಗುರುಗಳಾದ ಸಂತರು, ಪಾದ್ರಿ, ಮೌಲ್ವಿ, ಬಂತೇಜಿ ಅವರುಗಳನ್ನು ಸಹ ಮೆರವಣಿಗೆಯಲ್ಲಿ ಭಾಗವಹಿಸುವಂತೆ ಗೌರವ ಪೂರ್ವಕವಾಗಿ ಆಮಂತ್ರಣ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಮೆರವಣಿಗೆಯಲ್ಲಿ ಆರು ಸ್ತಬ್ಧಚಿತ್ರಗಳ ಮೆರುಗು:
ಸಮ್ಮೇಳನಾಧ್ಯಕ್ಷರ ವಿಶೇಷ ರಥದ ಜೊತೆಗೆ 30 ಜಿಲ್ಲೆಗಳ ಸಾಂಸ್ಕೃತಿಕ ಪ್ರತಿನಿಧಿಗಳಾದ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರನ್ನೊಳಗೊಂಡ 10 ಪ್ರತ್ಯೇಕ ರಥಗಳು ಸಮ್ಮೇಳನಾಧ್ಯಕ್ಷರ ರಥಗಳನ್ನು ಹಿಂಬಾಲಿಸಲಿವೆ. ಮೆರವಣಿಗೆಯ ಮೆರಗು ಹೆಚ್ಚಿಸಲು 6 ಸ್ತ ಬ್ಧಚಿತ್ರಗಳು ಮತ್ತು ಕಲಬುರಗಿ ಕುರಿತು ಸಾಂಸ್ಕೃತಿಕ ಸಮಿತಿ ನಿರ್ಮಿಸಿದ ಕಿರುಚಿತ್ರವನ್ನು ಎಲ್.ಇ.ಡಿ. ವಾಹನದಲ್ಲಿ ಪ್ರಸಾರ ಮಾಡಲಾಗುವುದು ಎಂದು ವಿವರಿಸಿದರು.