ಕಲಬುರಗಿ : ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ ಕಲಬುರಗಿ ಜಿಲ್ಲೆಯಲ್ಲಿ ಕೋಟ್ಯಂತರ ರೂಪಾಯಿಗಳ ನಗದು ಮತ್ತು ವಸ್ತುಗಳನ್ನು ಚುನಾವಣಾ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೂ 4.5 ಕೋಟಿ ನಗದು, 1.15 ಕೋಟಿ ಮೌಲ್ಯದ ಮದ್ಯ ಹಾಗೂ 8.5 ಲಕ್ಷದ ಮೌಲ್ಯದ ಮಾದಕ ವಸ್ತುಗಳು ಸೇರಿ ಬರೋಬ್ಬರಿ 5.76 ಕೋಟಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ನೀತಿ ಸಂಹಿತೆ ಜಾರಿಯಾದ ನಂತರ ಜಿಲ್ಲೆಯಲ್ಲಿ ಸೂಕ್ತ ದಾಖಲೆಗಳಿಲ್ಲದೆ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ 4 ಕೋಟಿ 53 ಲಕ್ಷ ಹಣವನ್ನು ಜಪ್ತಿ ಮಾಡಲಾಗಿದೆ. ಇದುವರೆಗೂ 1,15, 04,746 ಕೋಟಿ ರೂಪಾಯಿ ಮೌಲ್ಯದ 41,530 ಲೀಟರ್ ಅಕ್ರಮ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ. ಜೊತೆಗೆ 8,54,300 ಮೌಲ್ಯದ 12.9 ಕೆಜಿ ಮಾದಕವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಇದಲ್ಲದೆ ಮತದಾರರಿಗೆ ಹಂಚಲು ತರಲಾಗಿದ್ದ ಸುಮಾರು 4,16,480 ರೂಪಾಯಿ ಮೌಲ್ಯದ 20,705 ನಾನಾ ಬಗೆಯ ವಸ್ತುಗಳು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿರುವ ಬಗ್ಗೆ ಒಟ್ಟು 21 ಎಫ್ಐಆರ್ ದಾಖಲಾಗಿದೆ. ಕಲಬುರಗಿ ಜಿಲ್ಲಾ ಕೇಂದ್ರದಲ್ಲಿರುವ ದಕ್ಷಿಣ ಕ್ಷೇತ್ರದಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿರುವ ಬಗ್ಗೆ 8 ಎಫ್ಐಆರ್ ದಾಖಲಾಗಿದೆ. ಅಲ್ಲದೆ ಹಲವು ವಾಹನಗಳನ್ನು ಜಪ್ತಿ ಮಾಡಲಾಗಿದೆ. ನಾಳೆ ಶಾಂತಿಯಿಂದ ಮತದಾನ ನಡೆಯಲು ಬೇಕಾದ ಕ್ರಮಗಳನ್ನು ಕೈಗೊಂಡಿದ್ದಾರೆ.
ಮತದಾನಕ್ಕೆ ಭದ್ರತಾ ಪಡೆಗಳ ನಿಯೋಜನೆ : ಚುನಾವಣೆ ಭದ್ರತೆ ಹಿನ್ನಲೆ ಕಲಬುರಗಿ ಗ್ರಾಮೀಣ ಕ್ಷೇತ್ರಗಳಿಗೆ ಸಿವಿಲ್ ಪೊಲೀಸ್, ಸಿಆರ್‌ಪಿಎಫ್ ಯೋಧರ ಪಡೆಯನ್ನು ನಿಯೋಜನೆ ಮಾಡಲಾಗಿದೆ. ಒಟ್ಟು 1755 ಸಿವಿಲ್ ಪೊಲೀಸರು, 600 ಜನ ಹೋಮ್ ಗಾರ್ಡ್ಸ್, 14 ಕೆಎಸ್ಆರ್ಪಿ ತುಕಡಿ, 21 ಸಿಆರ್‌ಪಿಎಫ್,ಎಸ್ಎಪಿ ಯೋಧರ ತಂಡವನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ.ಇನ್ನು, ಕಲಬುರಗಿ ನಗರ ಪೊಲೀಸ್ ವ್ಯಾಪ್ತಿಯಲ್ಲಿ ಪ್ರತ್ಯೇಕ ಪೊಲೀಸ್ ಹಾಗೂ ಯೋಧರ ಪಡೆ ನಿಯೋಜನೆ ಮಾಡಲಾಗಿದೆ.
ಇಡೀ ರಾಜ್ಯದಲ್ಲಿ ಇದುವರೆಗೂ 375.60 ಕೋಟಿ ರೂ. ಮೌಲ್ಯದ ನಗದು, ಮದ್ಯ, ಅಕ್ರಮ ವಸ್ತುಗಳನ್ನು ಚುನಾವಣಾ ಆಯೋಗದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಒಟ್ಟು 24.21 ಕೋಟಿ ರೂ. ಮೌಲ್ಯದ ಉಚಿತ ಉಡುಗೊರೆ, 83.66 ಕೋಟಿ ಮೌಲ್ಯದ ಒಟ್ಟು 22.27 ಲಕ್ಷ ಲೀಟರ್ ಮದ್ಯ, 23.66 ಕೋಟಿ ಮೌಲ್ಯದ 1,954 ಕೆಜಿ ಮಾದಕವಸ್ತು ಹಾಗೂ 96.59 ಕೋಟಿ ಮೌಲ್ಯದ ಚಿನ್ನ ಹಾಗೂ ಬೆಳ್ಳಿಯನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಸೋಮವಾರ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದೆ. ನಾಳೆ ರಾಜ್ಯದ 224 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಮೇ 13ಕ್ಕೆ ಮತ ಎಣಿಕೆ ನಡೆಯಲಿದ್ದು, ವಿವಿಧ ಪಕ್ಷಗಳ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
ಇದನ್ನೂ ಓದಿ : ರಾಜ್ಯದಲ್ಲಿ ಒಟ್ಟು ₹375.60 ಕೋಟಿ ಮೌಲ್ಯದ ನಗದು, ವಸ್ತುಗಳ ವಶ