ಕಲಬುರಗಿ: ಕಳೆದ ಜೂ.1 ರಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದ 283 ಮನೆಗಳು ಭಾಗಶಃ ಹಾನಿಗೊಂಡಿದ್ದು, ಹಾನಿಯಾದ ಮನೆಗಳ ಕುರಿತು ಜಂಟಿ ಸಮೀಕ್ಷಾ ಕಾರ್ಯ ಪ್ರಗತಿಯಲ್ಲಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ. ಇದಲ್ಲದೇ 20 ಕಿಮೀ ರಾಜ್ಯ ಹೆದ್ದಾರಿ, 27.50 ಕಿಮೀ ಜಿಲ್ಲಾ ಹೆದ್ದಾರಿ, 100 ಕಿಮೀ ಗ್ರಾಮೀಣ ರಸ್ತೆಗಳು ಸೇರಿದಂತೆ ಒಟ್ಟು 147.50 ಕಿಮೀ ರಸ್ತೆ, 84 ಸೇತುವೆಗಳು, 89 ಶಾಲಾ ಕೊಠಡಿಗಳು ಹಾಗೂ 38 ಅಂಗನವಾಡಿ ಕೇಂದ್ರಗಳು ಸಹ ಹಾನಿಗೊಳಗಾಗಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ತೀವ್ರ ಮಳೆಯಿಂದ ಜಿಲ್ಲಾದ್ಯಂತ 281 ವಿದ್ಯುತ್ ಕಂಬಗಳು, 35 ಟ್ರಾನ್ಸ್ಫಾರ್ಮರ್ಗಳು ಹಾನಿಗೊಂಡಿದ್ದು, ಈ ಪೈಕಿ ಕ್ರಮವಾಗಿ 203 ವಿದ್ಯುತ್ ಕಂಬಗಳು ಮತ್ತು 31 ಟ್ರಾನ್ಸ್ಫಾರ್ಮರ್ಗಳನ್ನು ದುರಸ್ತಿಗೊಳಿಸಿ ವಿದ್ಯುತ್ ಪ್ರಸರಣಕ್ಕೆ ಅನುವು ಮಾಡಿಕೊಡಲಾಗಿದೆ. ಇನ್ನು ಜಿಲ್ಲಾದ್ಯಂತ ಮಳೆಯಿಂದ ಯಾವುದೇ ಕೃಷಿ, ತೋಟಗಾರಿಕೆ ಬೆಳೆಗಳು ಹಾನಿಯಾಗಿರುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಜಿಲ್ಲಾಧಿಕಾರಿಗಳು, ಜಿಲ್ಲೆಯಲ್ಲಿನ ಮಳೆಯ ಪರಿಸ್ಥಿತಿ ಕುರಿತು ಈಗಾಗಲೇ ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಮಾಹಿತಿ ನೀಡಿದ್ದು, ಅವರು ಅಗತ್ಯ ಸಲಹೆ ಸೂಚನೆ ನೀಡಿದ್ದು, ಅದನ್ನು ಪಾಲಿಸಲಾಗುತ್ತಿದೆ ಎಂದಿದ್ದಾರೆ.
5 ಲಕ್ಷ ರೂ. ಪರಿಹಾರ ವಿತರಣೆ: ಕಳೆದ ಜು.24 ರಂದು ಜೇವರ್ಗಿ ತಾಲೂಕಿನ ಬಿರಾಳ (ಬಿ) ಗ್ರಾಮದಲ್ಲಿ ಮಳೆಯಿಂದ ಮನೆ ಕುಸಿತ ಪರಿಣಾಮ ಗ್ರಾಮದ 38 ವರ್ಷದ ಬಸಮ್ಮ, ಪತಿ ಬಸವರಾಜ ಬಳಗಾರ ಅವರು ಮೃತಪಟ್ಟಿದ್ದು, ಮೃತರ ವಾರಸುದಾರರಿಗೆ ಸರ್ಕಾರದ ಮಾರ್ಗಸೂಚಿಯಂತೆ 5 ಲಕ್ಷ ರೂ. ಪರಿಹಾರ ವಿತರಣೆ ಮಾಡಲಾಗಿದೆ. ಇನ್ನು ಜಿಲ್ಲಾದ್ಯಂತ ಯಾವುದೇ ಜಾನುವಾರುಗಳ ಪ್ರಾಣ ಹಾನಿ ಕುರಿತು ವರದಿಯಾಗಿಲ್ಲ ಎಂದು ಡಿಸಿ ಸ್ಪಷ್ಟಪಡಿಸಿದ್ದಾರೆ.
ಸಹಾಯವಾಣಿ ಸ್ಥಾಪನೆ: ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಮಳೆ ಸುರಿಯುತ್ತಿದ್ದು, ಭಾರಿ ಮಳೆಯಿಂದ ಸಾರ್ವಜನಿಕರಿಗೆ ಏನಾದರೂ ತೊಂದರೆಯಾದಲ್ಲಿ ಜಿಲ್ಲಾ ತುರ್ತು ನಿರ್ವಹಣಾ ಕೇಂದ್ರದ ಸಹಾಯವಾಣಿ ಸಂಖ್ಯೆ 08472-278677, ಟೋಲ್ ಫ್ರೀ ಸಂಖ್ಯೆ 1077ಗೆ ಸಂಪರ್ಕಿಸಲು ಕೋರಿದೆ. ಇದಲ್ಲದೇ ತಾಲೂಕು ಹಂತದಲ್ಲಿ ಅಫಜಲಪುರ 08470-282020, ಆಳಂದ-08477-202428, ಚಿಂಚೋಳಿ-8475200113, ಚಿತ್ತಾಪುರ-08474-236250, ಜೇವರ್ಗಿ 08442-236024, ಕಲಬುರಗಿ-08472-278657/ 278636, ಕಾಳಗಿ 9741680444, ಕಮಲಾಪುರ-7411843393, ಸೇಡಂ 08441-276184, ಶಹಾಬಾದ-08477-202428 ಹಾಗೂ ಯಡ್ರಾಮಿ 8147003348ಗೆ ಸಂಪರ್ಕಿಸಬಹುದಾಗಿದೆ.
ಬೆಳೆ ಹಾನಿ, ಜು.31 ರೊಳಗೆ ಲಿಖಿತ ದೂರು ಸಲ್ಲಿಸಲು ಸೂಚನೆ: ಪ್ರಸಕ್ತ 2023 - 24 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕಳೆದ ಮೂರು ದಿನದಲ್ಲಿ ಅಂದರೆ (ಜುಲೈ 26 ರಿಂದ 28 ವರೆಗೆ) ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾಗಿದ್ದರಿಂದ ಬೆಳೆ ಹಾನಿಯಾಗಿರುವ ಸಾಧ್ಯತೆ ಇರುವ ಕಾರಣ, ಬೆಳೆ ವಿಮೆ ಮಾಡಿಸಿದ ರೈತರು ದೂರು ದಾಖಲಿಸಲು ಯೂನಿವರ್ಸಲ್ ಸೊಂಪೂ ಜನರಲ್ ಇನ್ಶುರೆನ್ಸ್ ಕಂಪನಿಯ ಟೋಲ್ ಫ್ರೀ ಸಂ.1800-200-5142ಗೆ ಸಂಪರ್ಕಿಸಿದಾಗ ತಾಂತ್ರಿಕ ತೊಂದರೆ ಕಂಡು ಬರುತ್ತಿರುವದರಿಂದ ರೈತರು ಕೃಷಿ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಇದೇ ಜುಲೈ 31 ರೊಳಗೆ ಲಿಖಿತ ದೂರು ಸಲ್ಲಿಸುವಂತೆ ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ತಿಳಿಸಿದ್ದಾರೆ.
ಜುಲೈ 29 ಮತ್ತು 30 ರಂದು ಸಾರ್ವತ್ರಿಕ ರಜೆ ಇದ್ದರೂ ಸಹ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗಳು ತೆರೆಯಲಿದ್ದು, ರೈತರಿಂದ ದೂರು ಸ್ವೀಕರಿಸುವಂತೆ ವಿಮಾ ಸಂಸ್ಥೆಯ ಪ್ರತಿನಿಧಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಹೀಗಾಗಿ ಬೆಳೆ ಹಾನಿಯಾದ ಜಮೀನಿನ ರೈತರು ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ವಿಮೆ ಪಾವತಿ ದಾಖಲೆಯೊಂದಿಗೆ ಕೃಷಿ ಸಹಾಯಕ ನಿರ್ದೇಶಕರ ಕಚೇರಿಗೆ ಹೋಗಿ ಲಿಖಿತ ದೂರು ಸಲ್ಲಿಸಬಹುದಾಗಿದೆ. ತಡವಾಗಿ ಬಂದ ಅರ್ಜಿ ನಿರಾಕರಿಸುವ ಸಾಧ್ಯತೆ ಇರುವ ಕಾರಣ ಬೆಳೆ ಹಾನಿಯಾದ ರೈತರು ಕೂಡಲೇ ಲಿಖಿತ ದೂರು ನೀಡುವಂತೆ ರೈತ ಬಾಂಧವರಲ್ಲಿ ಸಮದ್ ಪಟೇಲ್ ಅವರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಉತ್ತರ ಕನ್ನಡದ 439 ಪ್ರದೇಶದಲ್ಲಿ ಭೂಕುಸಿತ ಸಾಧ್ಯತೆ.. ಸರ್ಕಾರಕ್ಕೆ ಭಾರತೀಯ ಭೌಗೋಳಿಕ ಸಮೀಕ್ಷೆ ವರದಿ ಸಲ್ಲಿಕೆ