ಕಲಬುರಗಿ: ಕರ್ನಾಟಕ ಮತ್ತು ಮಹಾರಾಷ್ಟ್ರದ ಭೀಮಾ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿರುವ ಕಾರಣ ಅಫಜಲಪುರ ತಾಲೂಕಿನ ಸೊನ್ನ ಬ್ಯಾರೇಜಿಗೆ ನೀರಿನ ಒಳ ಹರಿವು ಹೆಚ್ಚಿದ್ದು, ಬ್ಯಾರೇಜಿನಿಂದ 2500 ಕ್ಯೂಸೆಕ್ಸ್ ನೀರು ಭೀಮಾ ನದಿಗೆ ಹರಿಸಲಾಗಿದೆ.
ಬ್ಯಾರೇಜಿಗೆ ಒಳಹರಿವಿನ ನೀರಿನ ಪ್ರಮಾಣ 2500 ಕ್ಯೂಸೆಕ್ಸ್ ಇದ್ದು, ಅಷ್ಟೆ ಪ್ರಮಾಣದ ನೀರು ನದಿಗೆ ಬಿಡಲಾಗುತ್ತಿದೆ. ಆದ್ದರಿಂದ ನದಿ ಡಂಡೆಯಲ್ಲಿರುವ ಸಾರ್ವಜನಿಕರು ನದಿಯ ದಡಕ್ಕೆ ಹೋಗದಂತೆ ಮತ್ತು ಜಾನುವಾರುಗಳನ್ನು ಬಿಡದಂತೆ ಎಚ್ಚರಿಕೆ ವಹಿಸಬೇಕು ಎಂದು ಭೀಮಾ ಏತ ನೀರಾವರಿ ಯೋಜನೆಯ ಕಾರ್ಯಪಾಲಕ ಅಭಿಯಂತರ ಅಶೋಕ ಆರ್. ಕಲಾಲ್ ಮನವಿ ಮಾಡಿದ್ದಾರೆ.
ಸೊನ್ನ ಬ್ಯಾರೇಜ್ ಸಾಮರ್ಥ್ಯ 3.16 ಟಿಎಂಸಿ ಇದ್ದು, ಸೋಮವಾರ ಬೆಳಿಗ್ಗೆ 2.8 ಟಿ.ಎಂ.ಸಿ. ನೀರು ಸಂಗ್ರಹಣಗೊಂಡಿದೆ. ಕಳೆದ ವರ್ಷ ಇದೇ ದಿನಕ್ಕೆ ಹೋಲಿಸಿದರೆ ನೀರಿನ ಸಂಗ್ರಹಣೆ ಪ್ರಮಾಣ ಹೆಚ್ಚಿದೆ. ಕಳೆದ ವರ್ಷದ ಆಗಸ್ಟ್ 2ನೇ ವಾರದಲ್ಲಿ ಈ ಪ್ರಮಾಣದ ನೀರು ಬ್ಯಾರೇಜಿನಲ್ಲಿ ಸಂಗ್ರಹವಾಗಿತ್ತು ಎಂದರು. ಜುಲೈ ಮತ್ತು ಆಗಸ್ಟ್ ಮಾಹೆಯಲ್ಲಿ ಭೀಮಾ ಜಲಾನಯನ ಪ್ರದೇಶದಲ್ಲಿ ಮಳೆ ಬರುವ ಸಾಧ್ಯತೆ ಹೆಚ್ಚಿದ್ದು, ಆಗ ನೀರಿನ ಒಳಹರಿವು ಇನ್ನು ಹೆಚ್ಚಲಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಇಂದು 2500 ಕ್ಯೂಸೆಕ್ಸ್ ನೀರು ನದಿಗೆ ಹರಿಸಲಾಗಿದೆ ಎಂದು ಅಶೋಕ ಆರ್. ಕಲಾಲ್ ತಿಳಿಸಿದರು.
ಇನ್ನು 3.5 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯ ಸಾಮರ್ಥ್ಯವಿರುವ ಮೂರು ಘಟಕಗಳ ಪೈಕಿ ಎರಡು ಘಟಕಗಳಲ್ಲಿ ವಿದ್ಯುತ್ ಉತ್ಪಾದನೆಯನ್ನು ಸಹ ಬಂದ್ ಮಾಡಲಾಗುತ್ತಿದೆ ಎಂದರು.