ಕಲಬುರಗಿ : ಚಿಂಚೋಳಿ ವಿಧಾನಸಭೆ ಕ್ಷೇತ್ರದಲ್ಲಿ ಕೈ ಅಭ್ಯರ್ಥಿ ಸುಭಾಷ್ ರಾಠೋಡ ಪರ ಪ್ರಚಾರ ನಡೆಸಿದ ಕಾಂಗ್ರೆಸ್ ಅಧಿನಾಯಕರು, ತಮ್ಮ ಭಾಷಣದುದ್ದಕ್ಕೂ 'ಕೈ' ಕೊಟ್ಟು ಹೊದ ಉಮೇಶ್ ಜಾಧವ್ ವಿರುದ್ಧ ಹರಿಹಾಯ್ದರು. ಜನರ ಆಶೀರ್ವಾದವನ್ನ ಹಣಕ್ಕೆ ಮಾರಿಕೊಂಡವರಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.
ಜಿಲ್ಲೆಯ ರಟಕಲ್ನಲ್ಲಿ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಉಮೇಶ್ ಜಾಧವ್ಗೆ ಟಿಕೇಟ್ ನೀಡಿ ಶಾಸಕನಾಗಿ ಮಾಡಿ, ಸಂಸದೀಯ ಕಾರ್ಯದರ್ಶಿ ಹುದ್ದೆ ಕೊಟ್ಟಿದ್ದು ಕಾಂಗ್ರೆಸ್. ಅವರು ಕೇಳಿದ ಎಲ್ಲ ಕೆಲಸಗಳನ್ನ ಮಾಡಿಕೊಟ್ಟು ಬೆಳೆಸಿದ ಖರ್ಗೆಯವರ ಬೆನ್ನಿಗೆ ಚೂರಿ ಹಾಕಿದ್ದಾರೆ. ಉಮೇಶ್ ಜಾಧವ್ ಒಬ್ಬ ಗೋಮುಖ ವ್ಯಾಘ್ರ ಎಂದು ವಾಗ್ದಾಳಿ ನಡೆಸಿದರು.
ಖರ್ಗೆ ಅವರಿಗೆ ಪುತ್ರ ವ್ಯಾಮೋಹ ಎನ್ನುವ ಉಮೇಶ್ ಜಾಧವ್ ತಮ್ಮ ಮಗನಿಗೆ ಟಿಕೇಟ್ ಕೊಡಿಸಿದ್ದು ಯಾಕೆ ? ಎಂದು ಪ್ರಶ್ನಿಸಿದರು. ಅಪ್ಪನಿಗೆ ಟಿಕೆಟ್, ಮಗನಿಗೆ ಟಿಕೆಟ್, ಜೊತೆಗೆ ಹಣ, ಅದೇನು ಪ್ಯಾಕೇಜೋ ಏನೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಡಿಸಿಎಂ ಪರಮೇಶ್ವರ್ ಮಾತನಾಡಿ, ಯಡಿಯೂರಪ್ಪ ಮುಖ್ಯಮಂತ್ರಿ ಆಗಬೇಕೆಂದು ಇನ್ನಿಲ್ಲದ ಪ್ರಯತ್ನ ಮಾಡ್ತಿದ್ದಾರೆ. ಆಪರೇಷನ್ ಕಮಲ ಮಾಡಿ ಹಣದ ಆಮಿಷವೊಡ್ಡುತ್ತಿದ್ದಾರೆ, ಅದಕ್ಕೆ ಬಲಿಯಾಗಿದ್ದು ಜಾಧವ್, ನಾವೆಲ್ಲ ಹಸ್ತ ಹಸ್ತ ಅಂತಾ ಪ್ರಚಾರ ಮಾಡಿ ಜಾಧವ್ರನ್ನು ಗೆಲ್ಲಿಸಿದರೆ, ನಮಗೇ ಹಸ್ತಕೊಟ್ಟು ಓಡಿ ಹೋಗಿದ್ದಾನೆ ಎಂದು ಲೇವಡಿ ಮಾಡಿದರು. ಜನಾಶೀರ್ವಾದವನ್ನು ಮಾರಿಕೊಂಡು ಹೋಗುವವರಿಗೆ ತಕ್ಕ ಪಾಠ ಕಲಿಸಬೇಕಿದೆ ಎಂದರು.
ಆಶೀರ್ವಾದ ಮಾಡಿದ ಜನರಿಗೆ ವಂಚನೆ ಮಾಡಿ ಮುಂಬೈಗೆ ಜಿಗಿದ ಉಮೇಶ್ ಜಾಧವ್, ಕಮಲ ಹಿಡಿದು ಬಂದ. ಆದ್ರೆ ಮುಂಬೈಯಿಂದ ಚಿಂಚೋಳಿಗೆ ತರೋದ್ರೊಳಗೆ ಕಮಲ ಬಾಡಿ ಹೋಗಿದೆ. ಹೀಗಾಗಿ ಬಾಡಿದ ಕಮಲಕ್ಕೆ ಬೆಂಬಲಿಸಬೇಡಿ. ಸಾಯೋವರೆಗೂ ಹಸ್ತ ನಿಮ್ಮೊಂದಿಗೇ ಇರುತ್ತದೆ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಉಮೇಶ್ ಜಾಧವ್ ವಿರುದ್ಧ ವಾಗ್ಧಾಳಿ ಮಾಡಿದರು.
ಸಚಿವರಾದ ರಾಜಶೇಖರ ಪಾಟೀಲ, ರಹೀಂ ಖಾನ್, ಪ್ರಿಯಾಂಕ್ ಖರ್ಗೆ, ಶಾಸಕ ಸೋಮಶೇಖರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮಾಜಿ ಸಚಿವ ಶರಣಪ್ರಕಾಶ ಪಾಟೀಲ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.