ರಾಣೆಬೆನ್ನೂರು: ಸಮಾಜದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರನ್ನು ಉತ್ತಮ ನಾಗರಿಕರನ್ನಾಗಿ ಬೆಳೆಸುವುದೇ ದೊಡ್ಡ ಕೆಲಸ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.
ರಾಣೆಬೆನ್ನೂರು ತಾಲೂಕಿನ ಸಣ್ಣಸಂಗಾಪುರ ಗ್ರಾಮದಲ್ಲಿ ಆಯೋಜಿಸಿದ್ದ ನೊಳಂಬ ಲಿಂಗಾಯತ ಸಮಾಜದ ಪ್ರತಿಭಾ ಪುರಸ್ಕಾರ ಹಾಗೂ ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದಿನ ಸಮುದಾಯಗಳು ಇನ್ನೂ ಕೂಡ ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡಲು ಆಗುತ್ತಿಲ್ಲ. ಸಮಾಜಗಳು ಮಕ್ಕಳಿಗೆ ಶಿಕ್ಷಣ ನೀಡಲು ಮುಂದಾಗಬೇಕು. ಸರ್ಕಾರ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಿದ್ದು, ಅವುಗಳನ್ನು ಹಿಂದುಳಿದ ಸಮಾಜಗಳು ಸದ್ಭಳಕೆ ಮಾಡಿಕೊಳ್ಳಲು ಹಿಂದೇಟು ಹಾಕುತ್ತಿವೆ. ಡಾ. ಬಿ.ಆರ್. ಅಂಬೇಡ್ಕರ್ ಹೇಳಿದಂತೆ ಶಿಕ್ಷಣ, ಸಂಘಟನೆ, ಹೋರಾಟವನ್ನು ಇಂತಹ ಸಮುದಾಯ ಬಳಸಿಕೊಳ್ಳಬೇಕು ಎಂದರು.
ಮಕ್ಕಳಿಗೆ ಶಿಕ್ಷಣ ಎಂದರೆ ಸ್ಫೂರ್ತಿ ತರುವಂತಿರಬೇಕೇ ಹೊರತು ಅದು ಒತ್ತಾಯ ಆಗಿರಬಾರದು. ಹಾಗಾಗಿ ಪಾಲಕರು ಮಕ್ಕಳ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ಮೂಲಕ ಶಿಕ್ಷಣ ನೀಡಬೇಕು ಎಂದು ಸಲಹೆ ನೀಡಿದರು.
ಓದಿ: ಕಲಬುರಗಿ: ಕನ್ನಡ ಭವನದಲ್ಲಿ ಗಮನ ಸೆಳೆದ ಚಿತ್ರಸಂತೆ
ನೊಳಂಬ ಪೀಠದ ಶ್ರೀ ಕ್ಷೇತ್ರ ನಂದಿಗುಡಿಯ ಸಿದ್ದರಾಮೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ತೋಟಗಾರಿಕೆ ಹಾಗೂ ರೇಷ್ಮೆ ಖಾತೆ ಸಚಿವ ಆರ್. ಶಂಕರ, ಮಾಜಿ ಸಚಿವ ಸೊಗಡು ಶಿವಣ್ಣ, ಜಿಪಂ ಅಧ್ಯಕ್ಷ ಏಕನಾಥ ಭಾನುವಳ್ಳಿ, ಮುಖಂಡರಾದ ಸಂತೋಷ ಪಾಟೀಲ ಹಾಜರಿದ್ದರು.