ಹಾವೇರಿ: ತಾಲೂಕಿನ ಹಾಂಸಿ, ಶಾಕಾರ ಗ್ರಾಮಗಳನ್ನು ತುಂಗಭದ್ರಾ ನದಿ ಹಾವೇರಿ ಜಿಲ್ಲೆಯಿಂದ ಪ್ರತ್ಯೇಕಿಸುತ್ತದೆ. ಇದರಿಂದಾಗಿ ಗ್ರಾಮಸ್ಥರು ತಮ್ಮ ನಿತ್ಯ ಕೆಲಸ ಕಾರ್ಯಕ್ಕಾಗಿ ಹಾವೇರಿ ತಾಲೂಕು ಕೇಂದ್ರ ಹಾಗೂ ಸಮೀಪದ ಗ್ರಾಮಗಳನ್ನು ಅವಲಂಬಿಸಿದ್ದಾರೆ. ಇದೇ ಕಾರಣದಿಂದ ಸಂಚರಿಸಲು ಬ್ರಿಡ್ಜ್ ಇಲ್ಲದೇ ಸಂಕಷ್ಟ ಎದುರಿಸುತ್ತಿದ್ದಾರೆ. ತೆಪ್ಪ ಅಥವಾ ದೋಣಿಗಳ ಸಹಾಯದಿಂದಲೇ ತುಂಗಭದ್ರಾ ನದಿ ದಾಟಿಯೇ ಹಾವೇರಿಗೆ ಬರಬೇಕಾದ ಪರಿಸ್ಥಿತಿ ಇದೆ. ಇದಲ್ಲದೇ ಇದ್ದರೆ 40 ಕಿ.ಮೀ ದೂರ ಕ್ರಮಿಸಿ ಹಾವೇರಿಯ ಗುತ್ತಲ, ಹಾವನೂರು ಗ್ರಾಮಕ್ಕೆ ಬರಬೇಕಾಗುತ್ತದೆ.
ಹಲವಾರು ವರ್ಷಗಳಿಂದ ಸಂಚಾರಕ್ಕೆ ಸೇತುವೆ ನಿರ್ಮಾಣ ಮಾಡಿ ಕೊಡಿ ಎಂದು ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಮಾಡಿದರೂ, ಯಾರೂ ನಮ್ಮ ಗೋಳು ಕೇಳುತ್ತಿಲ್ಲ ಎಂಬುದು ಇಲ್ಲಿನ ನಿವಾಸಿಗಳ ದೂರು. ವಿಜಯನಗರ ಜಿಲ್ಲೆಯ ಗಡಿ ಹಂಚಿಕೊಂಡಿರುವ ಹಾಂಸಿ, ಶಾಕಾರ ಗ್ರಾಮಗಳು ಬ್ರಿಟಿಷರ ಕಾಲದಿಂದಲೂ ಹಾವೇರಿ ಜಿಲ್ಲಾಡಳಿತಕ್ಕೆ ಒಳಪಟ್ಟಿವೆ. ಈ ಎರಡೂ ಗ್ರಾಮಗಳು ಹಾವೇರಿ ವಿಧಾನಸಭಾ ಕ್ಷೇತ್ರಕ್ಕೆ ಸೇರುತ್ತವೆ.
ಶಾಕಾರ ಗ್ರಾಮದಿಂದ ಕೂಗಳತೆ ದೂರದಲ್ಲಿ ಹಾವೇರಿಯ ದೊಡ್ಡ ಗ್ರಾಮಗಳಲ್ಲಿ ಒಂದಾದ ಹಾವನೂರು ಕೂಡ ಇದೆ. ಈ ಗ್ರಾಮಕ್ಕೆ ಶಾಕಾರ ಗ್ರಾಮದಿಂದ ತುಂಗಭದ್ರಾ ಮೇಲೆ ಹೋದರೆ ಸ್ವಲ್ಪವೇ ದೂರವಿದೆ. ಈ ದೂರವನ್ನು ಇಲ್ಲಿಯ ಗ್ರಾಮಸ್ಥರು ತೆಪ್ಪದಲ್ಲಿ ದಾಟುತ್ತಾರೆ. ತೆಪ್ಪ ಬಿಟ್ಟರೆ, ದೋಣಿಗಳ ಸಹಾಯದಿಂದಲೇ ಇವರೆಲ್ಲ ಸಂಚರಿಸಬೇಕಾದ ಪರಿಸ್ಥಿತಿ ಇದೆ. ಬೇಸಿಗೆ ಕಾಲದಲ್ಲಿ ತುಂಗಭದ್ರಾ ಒಡಲು ಬರಿದಾಗಿದ್ದರೆ ಹಾಂಸಿ, ಶಾಕಾರ ಗ್ರಾಮಸ್ಥರು ಹಾವನೂರು ಗ್ರಾಮಕ್ಕೆ ನಡೆದು ಇಲ್ಲವೇ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಾರೆ. ಮಳೆಗಾಲದಲ್ಲಿ ನದಿ ಮೈದುಂಬಿದರೆ ದೋಣಿಯ ಸಹಾಯದಿಂದ ಸಂಚರಿಸಬೇಕು. ತೆಪ್ಪದ ಸಂಪರ್ಕ ಬಿಟ್ಟರೆ ಈ ಗ್ರಾಮಗಳು ಹಾವೇರಿ ಜಿಲ್ಲೆಯನ್ನು ಸಂಪರ್ಕಿಸಲು ಸುಮಾರು 40 ಕಿ.ಮೀಟರ್ ದೂರದ ಪಯಣವನ್ನು ಮಾಡಬೇಕಾಗಿದೆ.
ಶಿಕ್ಷಣ, ಆರೋಗ್ಯಕ್ಕೂ ಪರದಾಟ: ಗ್ರಾಮದ ಜನರು ಬೂದನೂರು, ಹೊಳಲ ಮೈಲಾರದ ಮೂಲಕ ಹಾವೇರಿ ತಾಲೂಕಿನ ಹೋಬಳಿ ಕೇಂದ್ರ ಗುತ್ತಲಕ್ಕೆ ಬಂದು ಸೇರುತ್ತಾರೆ. ಆದರೆ, ಶಿಕ್ಷಣ ಮತ್ತು ಆರೋಗ್ಯ ವಿಚಾರದಲ್ಲಿ ಈ ಗ್ರಾಮಗಳು ಮಳೆಗಾಲದಲ್ಲಿ ತೀವ್ರ ಸಂಕಷ್ಟ ಎದುರಿಸುತ್ತಿವೆ. ಗರ್ಭಿಣಿಯರನ್ನು ಹೆರಿಗೆಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುವುದಾಗಲಿ, ಆರೋಗ್ಯದ ತುರ್ತು ಸಂದರ್ಭಗಳಲ್ಲಿ ಈ ಗ್ರಾಮದವರು ಗಂಟೆಗಟ್ಟಲೆ ಸುತ್ತಾಡಿ ಗುತ್ತಲ ಅಥವಾ ಹಾವನೂರು ಗ್ರಾಮಕ್ಕೆ ಬರಬೇಕಾದ ಪರಿಸ್ಥಿತಿ ಇದೆ. ಗರ್ಭಿಣಿಯರು, ಅಸ್ವಸ್ಥರನ್ನು ತೆಪ್ಪದಲ್ಲಿ ಕರೆದುಕೊಂಡು ಹೋಗಲಾಗದೇ, ಕೆಲವೊಮ್ಮೆ ಗರ್ಭಿಣಿಯರು, ಅಸ್ವಸ್ಥರು ಗ್ರಾಮದಲ್ಲಿಯೇ ಪ್ರಾಣಬಿಟ್ಟಿರುವ ಪ್ರಸಂಗಗಳೂ ಇವೆ. ಈ ರೀತಿಯ ಸಂಕಷ್ಟ ಯಾವ ಗ್ರಾಮಕ್ಕೂ ಬರಬಾರದು ಎನ್ನುತ್ತಾರೆ ಇಲ್ಲಿನ ನೊಂದ ಗ್ರಾಮಸ್ಥರು.
ಜಿಲ್ಲಾಡಳಿತ, ತಾಲೂಕು ಆಸ್ಪತ್ರೆ, ಶಾಲೆ ಇರುವುದು ಒಂದು ಜಿಲ್ಲೆಯಲ್ಲಿ. ಆದರೆ, ಭೌಗೋಳಿಕವಾಗಿ ಈ ಗ್ರಾಮಗಳು ಇರುವುದು ವಿಜಯನಗರ ಜಿಲ್ಲೆಯಲ್ಲಿ. ಅಂದು ಬ್ರಿಟಿಷರು ಮಾಡಿದ ತಪ್ಪಿನಿಂದ ನಾವು ಈಗಲೂ ಸಮಸ್ಯೆ ಎದುರಿಸುತ್ತಿದ್ದೇವೆ ಎನ್ನುತ್ತಾರೆ ಈ ಗ್ರಾಮಗಳ ಜನರು. ಸೇತುವೆ ನಿರ್ಮಾಣಕ್ಕಾಗಿ ಹಲವಾರು ಬಾರಿ ಮಾಜಿ ಸಿಎಂ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಭೇಟಿಯಾಗಿ ಮನವಿ ಸಲ್ಲಿಸಿದ್ದೇವೆ. ಈಗ ಪ್ರಸ್ತುತ ಸಿಎಂ ಸಿದ್ದರಾಮಯ್ಯ ಅವರಿಗೂ ಸಹ ಮನವಿ ಸಲ್ಲಿಸಿದ್ದೇವೆ. ಆದರೆ, ಏನೂ ಪ್ರಯೋಜನ ಆಗಿಲ್ಲ ಎನ್ನುತ್ತಾರೆ ಗ್ರಾಮಸ್ಥರು.
ಗ್ರಾಮಗಳ ಸಮಸ್ಯೆ ಕುರಿತಾಗಿ ಸ್ಥಳೀಯ ಶಾಸಕರು, ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸ್ಪಂದನೆ ಸಿಕ್ಕಿಲ್ಲ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದಾಗ, ಆ ಕ್ಷಣ ಮಾಡುತ್ತೇವೆ ಎಂದು ಭರವಸೆ ನೀಡುತ್ತಾರೆಯೇ ವಿನಃ ಸಮಸ್ಯೆ ಗಮನಹರಿಸಿಲ್ಲ. 2023ರ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವ ನಿರ್ಧಾರಕ್ಕೆ ಬರಲಾಗಿತ್ತು. ತಹಶೀಲ್ದಾರ್ ಆಗಮಿಸಿ ಮತದಾನ ಮಾಡಿ ಸೇತುವೆ ನಿರ್ಮಿಸುವ ಕುರಿತಂತೆ ಚರ್ಚಿಸುತ್ತೇನೆ ಎಂದಿದ್ದರು. ಆದರೆ, ಚುನಾವಣೆ ಮುಗಿದು ಸರ್ಕಾರ ರಚನೆಯಾದರೂ ತಹಸೀಲ್ದಾರ್ ಇತ್ತ ಕಡೆ ಬಂದಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ. ಜನಪ್ರತಿನಿಧಿಗಳು, ಅಧಿಕಾರಿಗಳು ಈ ಕುರಿತಂತೆ ಶೀಘ್ರ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೇ ಉಗ್ರ ರೀತಿಯಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ಜನರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: 2019ರ ಪ್ರವಾಹ: 4 ವರ್ಷ ಕಳೆದರೂ ಮಲೆಮನೆ, ಮದುಗುಂಡಿ ನಿರಾಶ್ರಿತರಿಗೆ ಸಿಕ್ಕಿಲ್ಲ ಸೂರು