ರಾಣೆಬೆನ್ನೂರು : ಸುಮಾರು 50ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ಪಶು ಆಸ್ಪತ್ರೆ ಉದ್ಘಾಟನೆ ಭಾಗ್ಯ ಕಾಣದೇ ಹಾಳು ಕೊಂಪೆಯಂತಾಗಿದೆ.
ಇಲ್ಲಿನ ಮೇಡ್ಲೇರಿ ಗ್ರಾಮದಲ್ಲಿ ಭೂಸೇನಾ ನಿಗಮದಿಂದ ನಿರ್ಮಿಸಿರುವ ಪಶು ಆಸ್ಪತ್ರೆ ಕಳೆದ ಒಂದು ವರ್ಷದ ಹಿಂದೆ ನಿರ್ಮಾಣ ಮಾಡಲಾಗಿದೆ. ಆದರೆ, ಈವರೆಗೂ ಕೂಡ ಉದ್ಘಾಟನೆ ಮಾತ್ರ ಮಾಡದೆ ಹಾಳು ಬಿದ್ದಿದೆ.
‘ಈ ಗ್ರಾಮದಲ್ಲಿ ಹೆಚ್ಚಾಗಿ ಕುರುಬ ಸಮುದಾಯದವರಿದ್ದು ಕುರಿ, ಮೇಕೆ, ದನ ಕರುಗಳ ಸಂಖ್ಯೆ ಹೆಚ್ಚಾಗಿವೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರ ಮನವಿ ಮೇರೆಗೆ ಪಶು ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ.
ಕಟ್ಟಡದ ಸುತ್ತ ಗಿಡ ಗಂಟೆ ಬೆಳೆದು ನಿಂತಿದ್ದು, ಆಸ್ಪತ್ರೆ ಆವರಣದ ಮುಂದೆ ಊರಿನ ಚರಂಡಿ ನೀರು ಬಂದು ನಿಲ್ಲುತ್ತಿದೆ. ಇದರಿಂದ ಇಲ್ಲಿನ ವಾತಾವರಣ ಹದಗೆಡುತ್ತಿದ್ದು, ಲಕ್ಷಾಂತರ ರೂ ವೆಚ್ಚದಲ್ಲಿ ನಿರ್ಮಾಗೊಂಡಿರುವ ಕಟ್ಟಡ ಹಾನಿಯಾಗುವ ಸಾಧ್ಯತೆ ಹೆಚ್ಚಾಗಿದೆ.
ಸ್ಥಳೀಯ ಶಾಸಕರಾದರೂ ಈ ಬಗ್ಗೆ ಗಮನಹರಿಸಿ ಉದ್ಘಾಟನೆ ಮಾಡುವ ಮೂಲಕ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.