ಹಾವೇರಿ: ಎಟಿಎಂಗಳಲ್ಲಿ ಸಹಾಯ ಮಾಡುವುದಾಗಿ ಮೋಸ ಮಾಡುತ್ತಿದ್ದ ಆರೋಪಿಯನ್ನು ಹಿರೇಕೆರೂರು ತಾಲೂಕಿನ ಹಂಸಭಾವಿ ಪೊಲೀಸರು ಬಂಧಿಸಿದ್ದಾರೆ. ಗಿರೀಶ್ ಅಲಿಯಾಸ್ ನಿತ್ಯಾನಂದ ಮುನಿಯಪ್ಪನವರ್(26) ಬಂಧಿತ.
ಈತ ಎಟಿಎಂಗಳಿಗೆ ಹಣ ತೆಗೆಯಲು ಬರುವ ಜನರಿಗೆ ಸಹಾಯ ಮಾಡುವಂತೆ ನಟಿಸಿ, ಪಿನ್‌ಕೋಡ್ ಪಡೆದು ಕಾರ್ಡ್ ಬದಲಿಸುತ್ತಿದ್ದ. ನಂತರ ಬೇರೆ ಪಟ್ಟಣಗಳಿಗೆ ಹಣ ಲಪಟಾಯಿಸುತ್ತಿದ್ದ ಎನ್ನುವುದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ.
ಜೂ.3ರಂದು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮತ್ತೂರು ಗ್ರಾಮದ ಬೀರಪ್ಪ ಹಂಸಭಾವಿ ಹಣ ತೆಗೆಯಲು ಸ್ಥಳೀಯ ಎಟಿಎಂ ಬಳಿ ಹೋಗಿದ್ದಾರೆ. ಆಗ ಎಟಿಎಂ ಬಳಿ ನಿಂತಿದ್ದ ಆರೋಪಿ ಗಿರೀಶ್, ಬೀರಪ್ಪ ಅವರ ಕಾರ್ಡ್ ಪಡೆದು ಹಣ ತೆಗೆದುಕೊಟ್ಟಿದ್ದಾನೆ. ಇದೇ ವೇಳೆ, ಪಿನ್‌ಕೋಡ್ ತಿಳಿದುಕೊಂಡು ಬೇರೆ ಎಟಿಎಂ ಕಾರ್ಡ್ ನೀಡಿದ್ದನಂತೆ.
ಇದಾದ ಬಳಿಕ ಆರೋಪಿ ರಾಣೆಬೆನ್ನೂರಲ್ಲಿ 20 ಸಾವಿರ ರೂ., ಹರಿಹರದಲ್ಲಿ 20 ಸಾವಿರ ರೂ., ಹಾಗೂ ಶಿಕಾರಿಪುರದಲ್ಲಿ 20 ಸಾವಿರ ರೂ. ಸೇರಿ ಒಟ್ಟು 60 ಸಾವಿರ ರೂ. ತೆಗೆದಿದ್ದಾನೆ. ಈ ಬಗ್ಗೆ ಬೀರಪ್ಪ ಅವರ ಮೊಬೈಲ್‌ಗೆ ಸಂದೇಶ ಬಂದಿದೆ. ಅನುಮಾನಗೊಂಡು ಬ್ಯಾಂಕ್ಗೆ ತೆರಳಿದಾಗ ತಾನು ಮೋಸ ಹೋಗಿರುವುದು ಗೊತ್ತಾಗಿದೆ. ತಕ್ಷಣ ಬ್ಯಾಂಕ್ ಮ್ಯಾನೇಜರ್ ಜತೆ ಚರ್ಚಿಸಿ ಅಕೌಂಟ್ ಬ್ಲಾಕ್ ಮಾಡಿಸಿ, ಹಂಸಭಾವಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿ ಗಿರೀಶ್ನನ್ನು ಕರೆತಂದು ವಿಚಾರಣೆಗೊಳಪಡಿಸಿದ್ದು, ಆತ ಎಟಿಎಂನಿಂದ 60 ಸಾವಿರ ರೂ. ತೆಗೆದುಕೊಂಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಇದನ್ನೂ ಓದಿ: ಸಹಾಯ ಮಾಡುವ ನೆಪದಲ್ಲಿ ಎಟಿಎಂ ಕಾರ್ಡ್ ಬದಲಿಸಿ ವಂಚಿಸುತ್ತಿದ್ದ ಕಟ್ಟಡ ಕಾರ್ಮಿಕ ಅರೆಸ್ಟ್