ಹಾವೇರಿ: ಆಪರೇಷನ್ ಹಸ್ತಕ್ಕೆ ಒಳಗಾಗಿ ಕಾಂಗ್ರೆಸ್‌ಗೆ ಹೋಗುವ ನಾಯಕರ ಕಥೆ ಲೋಕಸಭೆ ಚುನಾವಣೆ ನಂತರ ನಾಯಿ ಪಾಡಾಗುತ್ತದೆ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.
ಹಾವೇರಿ ಜಿಲ್ಲೆ ಹಿರೇಕೆರೂರಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ, ನಂತರ ಮಾತನಾಡಿದ ಅವರು, ಈಗಾಗಲೇ ಅಲ್ಲಿ 136 ಶಾಸಕರಿದ್ದಾರೆ. ಹೊಸದಾಗಿ ಹೋಗುವವರು 137, 138 ಸ್ಥಾನಕ್ಕೆ ಹೋಗಬೇಕು. ಈಗಾಗಲೇ ಗೃಹ ಸಚಿವ ಪರಮೇಶ್ವರ್ ಅವರು ಹೇಳಿದಂತೆ ಅವರಿಗೆ ಕೊನೆಯ ಬೆಂಚ್ ಗತಿ. ಆಪರೇಷನ್ ಹಸ್ತ ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್‌ಗೆ ಮುಳುವಾಗಲಿದೆ. ಅಲ್ಲಿಗೆ ಹೋಗುವವರು ಇಲ್ಲಿರುವ ಸ್ಥಾನ ಕಳೆದುಕೊಳ್ಳುತ್ತಾರೆ. ಅಲ್ಲಿ ಸಹ ಯಾವ ಸ್ಥಾನ ಸಿಗುವುದಿಲ್ಲ ಎಂದು ತಿಳಿಸಿದ್ದಾರೆ.
ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಮಾಜಿ ಸಚಿವ ಈಶ್ವರಪ್ಪ ಅವರ ಪುತ್ರ ಕಾಂತೇಶ್ ಅಭ್ಯರ್ಥಿ ಕುರಿತು ಮಾತನಾಡಿದ ಅವರು, ಈಶ್ವರಪ್ಪ ಈ ಕುರಿತಂತೆ ಸಂಬಂದಪಟ್ಟವರಿಂದ ಹೇಳಿಸಲಿ ಆಮೇಲೆ ತಮ್ಮ ಮಗನ ಪರ ಪ್ರಚಾರ ಮಾಡಲಿ. ಹಾವೇರಿ ಲೋಕಸಭೆ ಕ್ಷೇತ್ರದಲ್ಲಿ ಹಾವೇರಿ ಅಥವಾ ಗದಗ ಜಿಲ್ಲೆಯವರಿಗೆ ನೀಡಿದರೆ, ಅವರು ಗೆಲ್ಲುವ ಕೆಲಸ ಮಾಡುವುದಾಗಿ ತಿಳಿಸಿದರು.
ಹಾವೇರಿಯಲ್ಲಿ ಶನಿವಾರ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಭೆ ಕರೆದಿದ್ದು, ಅದರಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪಾಲ್ಗೊಳ್ಳುತ್ತಾರೆ. ಈ ಕುರಿತಂತೆ ಚರ್ಚಿಸಲಾಗುವುದು. ರೈತರ ಆತ್ಮಹತ್ಯೆ ಬಗ್ಗೆ ಹಗುರವಾಗಿ ಮಾತನಾಡಿರುವ ಸಚಿವ ಶಿವಾನಂದ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡರೆ ಅವರಿಗೆ ನಮ್ಮ ತಾಲೂಕಿನ ರೈತರಿಂದ 1 ಕೋಟಿ ರೂಪಾಯಿ ಪರಿಹಾರ ನೀಡುತ್ತೇವೆ. ಆತ್ಮಹತ್ಯೆ ಮಾಡಿಕೊಳ್ಳುತ್ತಾರಾ ಕೇಳಿ. ಐದು ಲಕ್ಷ ರೂಪಾಯಿ ಪರಿಹಾರ ಸಿಗುತ್ತೆ ಎಂದು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿಲ್ಲ. ಆತ ಸಂಕಷ್ಟ ಬಂದಾಗ ಪ್ರಾಣ ಕಳೆದುಕೊಳ್ಳುತ್ತಿದ್ದಾನೆ. ರೈತರ ಬಗ್ಗೆ ಅವಹೇಳನಕಾರಿ ಮಾತನಾಡಿದ ಸಚಿವ ಶಿವಾನಂದ ಪಾಟೀಲ್ ಸಚಿವ ಸ್ಥಾನದಿಂದ ಕಿತ್ತುಹಾಕಬೇಕು. ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಿಂದ ತೆಗೆದುಹಾಕಬೇಕು ಎಂದು ಒತ್ತಾಯಿಸಿದರು.
ಲೋಕಸಭೆ ಚುನಾವಣಿಗೆ ಬಿಜೆಪಿ ಹೈಕಮಾಂಡ್ ಜೆಡಿಎಸ್ ಜೊತೆ ಮೈತ್ರಿಯನ್ನು ಸ್ವಾಗತಿಸಿದ ಪಾಟೀಲ್ ಹೈಕಮಾಂಡ್ ನಿರ್ಧಾರಕ್ಕೆ ಸಹಮತವಿದೆ. 2024 ರಲ್ಲಿ ಪ್ರದಾನಿ ನರೇಂದ್ರ ಮೋದಿ ಮತ್ತೊಮ್ಮ ಪ್ರಧಾನಿಯಾಗುವ ಹಿನ್ನೆಲೆಯಲ್ಲಿ ಮೈತ್ರಿ ಮಾಡಿಕೊಳ್ಳಲಾಗಿದೆ. ಅವರು ಮೂರನೇಯ ಬಾರಿ ದೇಶದ ಪ್ರಧಾನಿಯಾಗಲಿದ್ದಾರೆ. ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ಗ್ಯಾರಂಟಿಗಳ ನೆಪದಲ್ಲಿ ರೈತ ಸಮುದಾಯವನ್ನು ಕಡೆಗಣಿಸಿದೆ ಎಂದು ಆರೋಪಿಸಿದ್ದಾರೆ.
ರಾಜ್ಯದಲ್ಲಿ ರೈತರು ಸಾಲುಸಾಲಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಅದರ ಬಗ್ಗೆ ಅವರು ಮಾತನಾಡುತ್ತಿಲ್ಲ. ಹಾವೇರಿ ಜಿಲ್ಲೆಯಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ವಾಡಿಕೆ ಮಳೆಗಿಂತ 127 ಮಿಲಿಮೀಟರ್ ಮಳೆ ಕಡಿಮೆಯಾಗಿದೆ. ಆದರೂ ಸಹ ಹಾವೇರಿ ಜಿಲ್ಲೆಯನ್ನು ಬರಗಾಲ ಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಿಲ್ಲ. ಹಾವೇರಿ ಜಿಲ್ಲೆಯೊಂದರಲ್ಲಿ 18 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಹಿಂದೆ ಸಿಎಂ ಸಿದ್ದರಾಮಯ್ಯ 2013 ರಿಂದ 2018 ಅವಧಿಯಲ್ಲಿ ಸಹ ಅತೀ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ವರ್ಷ ಸಹ ರೈತರ ಆತ್ಮಹತ್ಯೆಗಳು ಆರಂಭವಾಗಿವೆ. ಆದರೂ ಸಹ ಸರ್ಕಾರ ಬರ ಘೋಷಣೆ ಮಾಡುತ್ತಿಲ್ಲ.
ಕಳೆದ ವರ್ಷ ಇಷ್ಟೊತ್ತಿಗಾಗಲೇ ಬೆಳೆ ಪರಿಹಾರ ಸರ್ವೇ ಮಾಡಿಸಿ ಹಣ ಬಿಡುಗಡೆ ಮಾಡಲಾಗಿತ್ತು. ಈ ಸರ್ಕಾರ ಉಚಿತ ವಿದ್ಯುತ್ ಪೂರೈಕೆ ಮಾಡುತ್ತೇವೆ ಎಂದು ಹೇಳಿ ವಿದ್ಯುತ್ ಲೋಡ್ ಶೆಡ್ಡಿಂಗ್ ಮಾಡುತ್ತಿದ್ದಾರೆ. ರೈತರಿಗೆ ಸಮರ್ಪಕವಾಗಿ ವಿದ್ಯುತ್ ಒದಗಿಸಲಾಗುತ್ತಿಲ್ಲ. ಹಿರೇಕೆರೂರು ತಾಲೂಕಿನಲ್ಲಿ ಮೂರು ನೀರಾವರಿ ಯೋಜನೆಗಳು ಲೋಕಾರ್ಪಣೆಯಾಗಿವೆ. ಆದರೆ ವಿದ್ಯುತ್ ಇಲ್ಲದ ಕಾರಣ ಅವುಗಳಿಂದ ರೈತರ ಜಮೀನುಗಳಿಗೆ ನೀರು ಹರಿಸಲಾಗುತ್ತಿಲ್ಲ. ನಮ್ಮ ಸರ್ಕಾರವಿದ್ದಾಗ ಅಡುಗೆ ಮಾಡಿ ಇಟ್ಟಿದ್ದೇವೆ. ಆದರೆ ಕಾಂಗ್ರೆಸ್ ಸರ್ಕಾರ ಅದನ್ನು ಬಡಿಸಲು ಸಹ ಆಗುತ್ತಿಲ್ಲ ಎಂದು ಆರೋಪಿಸಿದರು.
ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ನೆಪದಲ್ಲಿ ಜನರನ್ನು ದೋಚುತ್ತಿದೆ. ವಿದ್ಯುತ್ ಯುನಿಟ್ ದರ 10 ರೂಪಾಯಿಯಾಗಿದೆ, ಹೊಂದಾಣಿಕೆ ದರ ಹಾಕುತ್ತಾರೆ. ಅದಲ್ಲದೆ ಡೀಸಲ್ ಖರ್ಚು ಹಾಕುತ್ತಿದ್ದಾರೆ. ದರಗಳು ಹೆಚ್ಚಾಗಿದ್ದು, ಜನರ ಸುಲಿಗೆ ಮಾಡುತ್ತಿದ್ದಾರೆ. ಹೆಂಡತಿಗೆ ಬಸ್ ಉಚಿತ, ಆದರೆ ಪತಿ ಡಬಲ್ ಚಾರ್ಜ್ ಎಂದು ವ್ಯಂಗ್ಯವಾಡಿದರು. ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ. ಅಧಿಕಾರಿಗಳು ಕಾಂಗ್ರೆಸ್ ಸರ್ಕಾರದ ಜೊತೆ ಶಾಮೀಲಾಗಿದ್ದು, ಆಡಳಿತ ಹದಗೆಟ್ಟಿದ್ದು ಸರ್ಕಾರಕ್ಕೆ ಬಾರಕೋಲ್ ಚಾಟಿ ಏಟು ನೀಡುವುದಕ್ಕಾಗಿ ಈ ಪ್ರತಿಭಟನೆ ಮಾಡುತ್ತಿರುವುದಾಗಿ ತಿಳಿಸಿದರು.
ಇದನ್ನೂ ಓದಿ : ಅನೈತಿಕ ಪೊಲೀಸ್ಗಿರಿ ನೆಪದಲ್ಲಿ ಕಾನೂನು ಕೈಗೆತ್ತಿಕೊಂಡರೆ ತಕ್ಕ ಕಾನೂನಿನ ಶಾಸ್ತಿ: ಸಿಎಂ