ಹಾವೇರಿ : ಕೊರೊನಾ ಬಂದಿದ್ದೇ ಬಂದಿದ್ದು ವಿದೇಶದಲ್ಲಿದ್ದವರೂ ಸ್ವದೇಶಕ್ಕೆ ವಾಪಸ್ ಬಂದರು. ನೆರೆ ರಾಜ್ಯಕ್ಕೆ ಹೋದವರು ತಮ್ಮ ರಾಜ್ಯಕ್ಕೆ ಮರಳಿದರು. ಅಷ್ಟೇ ಯಾಕೆ ಗ್ರಾಮಗಳಿಂದ ಬೆಂಗಳೂರಿಗೆ ತೆರಳಿದ್ದ ಟೆಕ್ಕಿಗಳು ಸ್ವಗ್ರಾಮಕ್ಕೆ ವಾಪಸಾದರು. ಈ ರೀತಿ ವಾಪಸ್ ಬಂದ ಕೆಲವರು ಕೊರೊನಾ ಭೀತಿಯಿಂದಾಗಿ ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾದರು. ಆದರೆ, ಹಾವೇರಿಯಿಂದ ಬೆಂಗಳೂರಿಗೆ ಹೋಗಿದ್ದ ಯುವಕರು ಮಾತ್ರ ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿಲ್ಲ, ಬದಲಿಗೆ ತಮ್ಮ ಕೆಲಸದಿಂದ ಸ್ಥಳೀಯರ ಪ್ರೀತಿಗೆ ಪಾತ್ರರಾಗಿದ್ದಾರೆ.
ಬೆಂಗಳೂರಿನಿಂದ ವಾಪಸ್ ಆದ ಎಂಟು ಜನ ಯುವಕರು ಹಾವೇರಿಯಲ್ಲಿ ಸಮಾನ ಮನಸ್ಕರ ವೇದಿಕೆ ರಚಿಸಿದ್ದಾರೆ. ಈ ವೇದಿಕೆ ಕೊರೊನಾ ಲಾಕ್‌ಡೌನ್ ಸಂದರ್ಭವನ್ನು ಜನರಿಗೆ ಸಹಾಯ ಮಾಡುವ ಮಾಧ್ಯಮವನ್ನಾಗಿಸಿಕೊಂಡಿದೆ. ವೇದಿಕೆ ಸದಸ್ಯರು ಚಾಣಾಕ್ಷತೆ ಹಾಗೂ ತಂತ್ರಜ್ಞಾನದ ಮೂಲಕ ಸೇವಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಗಂಗಾಧರ ಕುಲಕರ್ಣಿ, ಸುಶಿಲೇಂದ್ರ ಕುಲಕರ್ಣಿ, ಪವನ ಕುಲಕರ್ಣಿ, ಶಶಾಂಕ್ ಯಣ್ಣಿಯವರ್ ಈ ವೇದಿಕೆಯ ಪ್ರಮುಖ ಸದಸ್ಯರು. ನೇರವಾಗಿ ರೈತರಿಂದ ತಂದ ತರಕಾರಿಗಳನ್ನ ಲಾಕ್ಡೌನ್ನಿಂದಾಗಿ ಮನೆಯಲ್ಲಿರುವವರಿಗೆ ಪೂರೈಸುತ್ತಿದ್ದಾರೆ. ದಿನಸಿ ಅಂಗಡಿ ಸಾಮಾನುಗಳನ್ನು ಸೂಕ್ತ ಬೆಲೆಯಲ್ಲಿ ವಿಲೇವಾರಿ ಮಾಡುತ್ತಿದ್ದಾರೆ ಈ ವೇದಿಕೆ ಸದಸ್ಯರು.
ಇವರು http://www.staysafehaveri.in ವೆಬ್ಸೈಟ್ ಓಪನ್ ಮಾಡಿದ್ದಾರೆ. ಈ ವೆಬ್ಸೈಟ್ ಮೂಲಕ ಗ್ರಾಹಕರು ಮನೆಯಲ್ಲಿಯೇ ಕುಳಿತು ತರಕಾರಿ ಖರೀದಿಸಬಹುದು. ಆರ್ಡರ್ ಪಡೆದ ವೇದಿಕೆ ಸದಸ್ಯರು ತರಕಾರಿಗಳನ್ನು ಮನೆಗೆ ತಲುಪಿಸುತ್ತಾರೆ. ನೇರವಾಗಿ ತೆಗೆದುಕೊಳ್ಳುವವರು ವಿದ್ಯಾನಗರದಲ್ಲಿರುವ ದತ್ತಾತ್ರೇಯ ದೇವಸ್ಥಾನದ ಹತ್ತಿರದ ಅಂಗಡಿಯಲ್ಲಿ ಖರೀದಿಸಬಹುದು. ತರಕಾರಿಗಳನ್ನ ಸಾನಿಟೈಸರ್ನಿಂದ ಶುಚಿಗೊಳಿಸಿ ಮಾರಾಟ ಮಾಡುತ್ತಿದ್ದಾರೆ ಈ ವೇದಿಕೆಯ ಯುವಕರು. ಇವರ ಈ ಸಮಾಜಮುಖಿ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.