ಹಾವೇರಿ: ನೆರೆ ಹಾವಳಿ ಸಂತ್ರಸ್ತರ ನೆರವಿಗೆ ಹಾವೇರಿಯ ಸಂಘ ಸಂಸ್ಥೆಗಳು, ಮಠಾಧೀಶರು ಮುಂದಾಗಿದ್ದು, ಸ್ವಯಂ ಪ್ರೇರಣೆಯಿಂದ ಧನಸಹಾಯ ಸೇರಿದಂತೆ ಸಂತ್ರಸ್ತರಿಗೆ ದಿನೋಪಯೋಗಿ ವಸ್ತುಗಳನ್ನು ಸಂಗ್ರಹಿಸುತ್ತಿವೆ.
ಗ್ರಾಮಗಳಲ್ಲಿ ಭಕ್ತರ ಮನೆಗೆ ತೆರಳುವ ಶ್ರೀಗಳು, ಸಂತ್ರಸ್ತರಿಗೆ ಬೇಕಾಗುವ ಅಗತ್ಯ ವಸ್ತುಗಳನ್ನು ಪಡೆಯುತ್ತಿದ್ದಾರೆ. ಅಲ್ಲದೆ ಭಕ್ತರಿಂದ ಪಡೆದ ವಸ್ತುಗಳನ್ನು ಸರಿಯಾಗಿ ವಿಂಗಡಣೆ ಮಾಡಿ ಸಂತ್ರಸ್ತರಿಗೆ ವಿತರಿಸುತ್ತಿದ್ದಾರೆ. ಅಕ್ಕಿಮಠದ ಗುರುಲಿಂಗ ಸ್ವಾಮಿ ಮತ್ತು ಪ್ರಭುಸ್ವಾಮಿ ಮಠದ ಗುರುಸಿದ್ದ ಸ್ವಾಮಿಗಳು ಸ್ವತಃ ಜೋಳಿಗೆ ಹಿಡಿದು ಸಂತ್ರಸ್ತರ ನೆರವಿಗೆ ನಿಂತಿದ್ದಾರೆ.
ಇನ್ನು ಹಾವೇರಿ ಹುಕ್ಕೇರಿ ಮಠದ ಶ್ರೀಗಳು ಭಕ್ತರಿಂದ ವಸ್ತುಗಳನ್ನು ಸಂಗ್ರಹಿಸಿ ಅವುಗಳನ್ನು ಹಾವೇರಿ ಸೇರಿದಂತೆ ಪಕ್ಕದ ಜಿಲ್ಲೆಗಳ ಸಂತ್ರಸ್ತರಿಗೆ ತಲುಪಿಸುತ್ತಿದ್ದಾರೆ. ಹುಕ್ಕೇರಿ ಮಠದ ಸದಾಶಿವ ಶ್ರೀಗಳೇ ಸ್ವತಃ ವಸ್ತುಗಳನ್ನು ವಿಂಗಡಿಸಿ ಸಂತ್ರಸ್ತರಿಗೆ ಹಂಚುತ್ತಿದ್ದಾರೆ. ಪರಿಹಾರ ಕೇಂದ್ರಗಳಿಗೆ ತೆರಳುತ್ತಿರುವ ಶ್ರೀಗಳು, ಸಂತ್ರಸ್ತರಿಗೆ ಧೈರ್ಯ ತುಂಬುತ್ತಿದ್ದಾರೆ.