ಹಾವೇರಿ: ಬಹುತೇಕ ಸಕ್ಕರೆ ಕಾರ್ಖಾನೆಗಳು ರೈತರಿಗೆ ಮೋಸ ಮಾಡುತ್ತಿವೆ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಆರೋಪಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಇಳುವರಿಯಲ್ಲಿ, ತೂಕದಲ್ಲಿ ಮತ್ತು ಹಣ ನೀಡುವುದರಲ್ಲಿ ಮೋಸ ಮಾಡುತ್ತಿವೆ. ಈ ರೀತಿ ಮೋಸ ಮಾಡಿ ಮಾಡಿ 38 ಜನ ಶಾಸಕರು ಸಚಿವರು ಮತ್ತು ಸಂಸದರು ಸಕ್ಕರೆ ಕಾರ್ಖಾನೆ ಮಾಲೀಕರಾಗಿ ಕಬ್ಬು ಬೆಳೆಗಾರರನ್ನು ಹಿಂಡುತ್ತಿದ್ದಾರೆ. ಇಡೀ ದೇಶದಲ್ಲಿ ಈ ರೀತಿ ಕಬ್ಬಿನ ಬೆಳೆಗೆ ಕಡಿಮೆ ದರವನ್ನು ಎಲ್ಲಿಯೂ ಸಹ ನೀಡುತ್ತಿಲ್ಲ. ರೈತರು ಎಲ್ಲಿಯವರೆಗೆ ಮೋಸ ಸಹಿಸಿಕೊಳ್ಳಬೇಕು ಎಂದು ಪ್ರಶ್ನಿಸಿದರು.
ರೈತರು ಧೃತಿಗೆಡಬಾರದು, ಈ ಬಾರಿ ಕಬ್ಬು ಪ್ರತಿಶತ 50 ರಷ್ಟು ಕಡಿಮೆಯಾಗಿದೆ. ಕಬ್ಬು ಬೆಳೆಗಾರರು ತಮಗೆ ಇಷ್ಟ ಬಂದ ಕಾರ್ಖಾನೆಗೆ ಕಬ್ಬು ಮಾರಾಟ ಮಾಡಬಹುದು. ರೈತರು ಜಿಲ್ಲಾಧಿಕಾರಿಗಳಿಂದ ಒಂದು ಪರವಾನಿಗೆ ಪಡೆದರೆ ರೈತರು ತಮಗೆ ಬೇಕಾದ ಕಾರ್ಖಾನೆಗೆ ಕಬ್ಬನ್ನು ಮಾರಬಹುದು. ಆಧುನಿಕ ತಂತ್ರಜ್ಞಾನ ಬಂದರೂ ಸಹ ರೈತರಿಗೆ ಇಳುವರಿಯಲ್ಲಿ ಮೋಸ ಮಾಡಲಾಗುತ್ತಿದೆ. ನೂತನ ತಂತ್ರಜ್ಞಾನ ಅಳವಡಿಸಿದರೆ ರೈತರಿಗೆ ಆಗುವ ಮೋಸ ತಪ್ಪಿಸಬಹುದು ಎಂದು ಶಾಂತಕುಮಾರ್ ತಿಳಿಸಿದರು.
ಈ ವರ್ಷದಲ್ಲಿ ಕಬ್ಬಿನ ಇಳುವರಿ ಪ್ರತಿಶತ 50 ರಷ್ಟು ಕಡಿಮೆಯಾಗಿದ್ದು, ಕಬ್ಬು ಖರೀದಿಯಲ್ಲಿ ಸಕ್ಕರೆ ಕಾರ್ಖಾನೆಗಳಿಂದ ಪೈಪೋಟಿ ಏರ್ಪಟ್ಟಿದೆ. ಕಡಿಮೆ ಹಣ ನೀಡುವ ಮತ್ತು ಹಣ ಪಾವತಿಗೆ ಕಾಡಿಸುವ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಕಬ್ಬು ನೀಡದಂತೆ ಮನವಿ ಮಾಡಿದ ಅವರು, ಟನ್ ಕಬ್ಬಿಗೆ 3580 ರೂಪಾಯಿ ಖರ್ಚಾಗುತ್ತೆ ಎಂದು ಬೆಲೆ ನಿಗದಿ ಸಭೆಯಲ್ಲಿ ತಿಳಿಸಿದ್ದೆವು. ಆದರೂ ಸಹ ಕಬ್ಬಿಗೆ ಟನ್‌ಗೆ ನಿಗದಿಪಡಿಸಿದ ಹಣಕ್ಕಿಂತ ಕಡಿಮೆ ದರ ನೀಡಲಾಗುತ್ತದೆ ಎಂದು ಕುರುಬೂರು ಶಾಂತಕುಮಾರ್ ಆರೋಪಿಸಿದರು.
ರಾಜ್ಯದಲ್ಲಿ ಭೀಕರ ಬರಗಾಲವಿದೆ. ರಾಜಕೀಯ ಪಕ್ಷದವರು ರಾಜಕೀಯ ಚೆಲ್ಲಾಟ ಆಡುತ್ತಿದ್ದಾರೆ. ವಿಧಾನಸಭೆ ಅಧಿವೇಶನ ಎಂಬ ಹಗಲು ನಾಟಕವಾಡಲು ಸಿದ್ಧತೆ ನಡೆಸಿದ್ದಾರೆ ಎಂದು ಕುರುಬೂರು ಶಾಂತಕುಮಾರ್ ಟೀಕಿಸಿದರು.
ಸಾಲಮನ್ನಾಗೆ ಒತ್ತಾಯ: ಭೀಕರ ಬರಗಾಲದಿಂದ ರೈತವರ್ಗ ತತ್ತರಿಸಿದ್ದು, ಸರ್ಕಾರ ಎಚ್ಚೆತ್ತುಕೊಂಡು ಅಧಿವೇಶನದ ಮೊದಲೇ ರೈತರಿಗೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ಬರಪರಿಹಾರ ನಷ್ಟು ತುಂಬಿಕೊಡುವ ಕೆಲಸವನ್ನು ಸರ್ಕಾರ ಮಾಡಬೇಕು. ಬರಗಾಲದಿಂದಾಗಿ ರಾಜ್ಯದಲ್ಲಿ ಎಲ್ಲ ಬೆಳೆಗಳ ಉತ್ಪಾದನೆಯಲ್ಲಿ ಪ್ರತಿಶತ 50ರಷ್ಟು ಕುಸಿತ ಕಂಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು ಎಂದು ಕುರುಬೂರು ಶಾಂತಕುಮಾರ್ ಆಗ್ರಹಿಸಿದರು.
ಬೆಳೆ ವಿಮೆ ಎಲ್ಲ ಬೆಳೆಗೂ ವಿಸ್ತರಿಸಲಿ: ದೆಹಲಿ ಹೋರಾಟ ನಂತರ ಸ್ವಾಮಿನಾಥನ್ ಆಯೋಗ ವರದಿ ಪ್ರಕಾರ ದರ ನಿಗದಿ ಮಾಡುವುದಾಗಿ ತಿಳಿಸಿದ್ದರು. ಆದರೆ ದರ ನಿಗದಿ ಪ್ರತಿಭಟನೆ ನಡೆದು ಇಷ್ಟು ದಿನವಾದರೂ ಸಹ ಅದು ಜಾರಿಗೆ ಬಂದಿಲ್ಲ. ಬೆಳೆ ವಿಮೆಯನ್ನು ಎಲ್ಲ ಬೆಳೆಗಳಿಗೆ ವಿಸ್ತರಿಸಬೇಕು. ಬೆಳೆ ವಿಮೆಯಿಂದ ರೈತರಿಗೆ ನಷ್ಟದಲ್ಲಿದ್ದರೆ, ಬೆಳೆ ವಿಮೆ ಕಂಪನಿಗಳು ಶ್ರೀಮಂತವಾಗುತ್ತಿವೆ. ಈ ಹಿನ್ನೆಲೆ ಬೆಳೆವಿಮೆ ಕುರಿತಂತೆ ಕೆಲ ನಿಯಮಗಳ ಸರಳೀಕರಣ ಮಾಡಬೇಕು ಎಂದು ಶಾಂತಕುಮಾರ್ ಒತ್ತಾಯಿಸಿದರು.
ರೈತ ಸಮಾವೇಶ: ರೈತರ ಮಕ್ಕಳಿಗೆ ಯಾರೂ ಕನ್ಯೆ ನೀಡಲು ಮುಂದೆ ಬರುತ್ತಿಲ್ಲ. ಹೀಗಾಗಿ ಸರ್ಕಾರವೂ ರೈತರ ಮಕ್ಕಳನ್ನು ಮದುವೆಯಾಗುವ ವಧುವಿಗೆ ಸರ್ಕಾರಿ ನೌಕರಿಯಲ್ಲಿ ಪ್ರತಿಶತ 10 ರಷ್ಟು ಮೀಸಲಾತಿ ನೀಡಬೇಕು. ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ನಿವೃತ್ತಿಯಾದ ಮೇಲೆ ಪಿಂಚಣಿ ಬರುತ್ತೆ, ಆದರೆ ರೈತರಿಗೆ ಯಾವುದೇ ಪಿಂಚಣಿ ಇಲ್ಲಾ. ಪ್ರತಿ ತಿಂಗಳು ಕನಿಷ್ಠ ಐದು ಸಾವಿರ ರೂ. ಪಿಂಚಣಿ ನೀಡುವಂತೆ ಒತ್ತಾಯಿಸಿದ ಅವರು, ಇದೇ ಡಿಸೆಂಬರ್ 23 ರಂದು ಬೆಂಗಳೂರಿನಲ್ಲಿ ನಡೆಯುವ ವಿಶ್ವರ ರೈತರ ದಿನಾಚರಣಿಯ ಅಂಗವಾಗಿ ರೈತ ಸಮಾವೇಶ ಆಯೋಜಿಸಲಾಗಿದೆ. ಈ ಸಮಾವೇಶದಲ್ಲಿ ಸಾಲ ಮನ್ನಾ ಕುರಿತಂತೆ ಪ್ರತಿಯೊಬ್ಬ ರೈತನಿಂದ ಪತ್ರ ಬರೆಯಿಸಿ ಸರ್ಕಾರದ ಮುಖ್ಯಕಾರ್ಯದರ್ಶಿಗೆ ರವಾನಿಸಲಾಗುವುದು ಎಂದು ತಿಳಿಸಿದರು.
ಇದನ್ನೂಓದಿ:ಅಧಿವೇಶನದಲ್ಲಿ ಎಷ್ಟು ಸಮಸ್ಯೆ ಬಗೆಹರಿದಿವೆ ಎಂಬುದಕ್ಕೆ ಸರ್ಕಾರ ಶ್ವೇತಪತ್ರ ಹೊರಡಿಸಲಿ: ಶಾಂತಕುಮಾರ್