ಹಾವೇರಿ: ಖಾಸಗಿ ವೈದ್ಯ ನೀಡಿದ ಚುಚ್ಚುಮದ್ದಿನ ಪರಿಣಾಮ ಕಾಲೇಜು ವಿದ್ಯಾರ್ಥಿನಿಯೊಬ್ಬಳ ಎರಡೂ ಕೈಗಳು ಊದಿಕೊಂಡಿದ್ದು, ಆಕೆ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಹಾವೇರಿ ತಾಲೂಕಿನ ಕರ್ಜಗಿ ಗ್ರಾಮದಲ್ಲಿ ನಡೆದಿದೆ.
ಕಲ್ಲಾಪುರ ಗ್ರಾಮದ ವಿದ್ಯಾರ್ಥಿನಿ ಕರ್ಜಗಿಯ ತಮ್ಮ ಸಂಬಂಧಿಯೊಬ್ಬರ ಮನೆಯಲಿದ್ದು ಪಿಯು ವ್ಯಾಸಂಗ ಮಾಡುತ್ತಿದ್ದಾರೆ. ಆಕೆಗೆ ಡಿಸೆಂಬರ್ 5ರಂದು ಜ್ವರ ಕಾಣಿಸಿಕೊಂಡಿತ್ತು. ಕರ್ಜಗಿ ಖಾಸಗಿ ವೈದ್ಯರ ಬಳಿ ತೋರಿಸಿದ್ದಾರೆ. ಎರಡೂ ಕೈಗಳಿಗೆ ಎರಡು ಚುಚ್ಚುಮದ್ದು ನೀಡಿದ ಅವರು ಮಾತ್ರೆ ಬರೆದುಕೊಟ್ಟು ಬೇಗ ಹುಷಾರಾಗುತ್ತಾಳೆ ಎಂದು ಹೇಳಿ ಕಳುಹಿಸಿದ್ದಾರೆ.
ಚುಚ್ಚುಮದ್ದು ಪಡೆದ ಜಾಗದಲ್ಲಿ ವಿದ್ಯಾರ್ಥಿನಿಗೆ ಬಾವು ಬರಲಾರಂಭಿಸಿದೆ. ಈ ಕುರಿತಂತೆ ವೈದ್ಯರ ಬಳಿ ಕೇಳಿದರೆ, ಕಾವು ನೀಡುವಂತೆ, ವಿಕ್ಸ್ ಹಚ್ಚುವಂತೆ ಸಲಹೆ ನೀಡಿದ್ದಾರೆ. ಆದರೆ ಬಾವು ಮಾತ್ರ ಗುಣವಾಗಿಲ್ಲ. ದಿನದಿಂದ ದಿನಕ್ಕೆ ಕೈಗಳು ಕೊಳೆಯಲಾರಂಭಿಸಿವೆ. ತೀವ್ರ ಗಾಯಗಳಾದ ಹಿನ್ನೆಲೆಯಲ್ಲಿ ನಿಶಕ್ತಿಯಿಂದ ವಿದ್ಯಾರ್ಥಿನಿ ಇದೀಗ ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚುಚ್ಚುಮದ್ದು ಮಾಡಿರುವ ಜಾಗದಲ್ಲಿ ಗಾಯಗಳಾಗಿದ್ದು ಕೈಗಳಿಗೆ ಬ್ಯಾಂಡೇಜ್ ಹಾಕಲಾಗಿದೆ.
"ತಮ್ಮ ಮಗಳ ಈ ಪರಿಸ್ಥಿತಿಗೆ ಖಾಸಗಿ ವೈದ್ಯ ಉದಯಕುಮಾರ್ ಕಾರಣ" ಎಂದು ಪೋಷಕರು ಆರೋಪಿಸಿದ್ದಾರೆ. ತಪ್ಪಿತಸ್ಥ ವೈದ್ಯರ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ವಿಷಯ ಗಂಭೀರವಾಗುತ್ತಿದ್ದಂತೆ ಖಾಸಗಿ ವೈದ್ಯ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತಂತೆ ಹಾವೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದಾಗಿ ವಿದ್ಯಾರ್ಥಿನಿಯ ತಂದೆ ಸಿದ್ದಪ್ಪ ತಿಳಿಸಿದ್ದಾರೆ.
ವಿದ್ಯಾರ್ಥಿನಿ ಹೇಳಿದ್ದೇನು?: "ನಾನು 4 ದಿನಗಳ ಹಿಂದೆ ನೆಗಡಿ, ಜ್ವರ ಆಗಿತ್ತೆಂದು ಖಾಸಗಿ ವೈದ್ಯರ ಬಳಿ ಹೋಗಿದ್ದೆ. ಅವರು ನನ್ನ ಎರಡು ಕೈಗಳಿಗೆ ಇಂಜೆಕ್ಷನ್ ಕೊಟ್ಟಿದ್ದಾರೆ. ಅದಾಗಿ ನನ್ನ ಕೈಗಳು ಊದಿಕೊಂಡಿವೆ. ಈ ಬಗ್ಗೆ ವೈದ್ಯರ ಬಳಿ ಹೇಳಿದಾಗ ವಿಕ್ಸ್ ಹಚ್ಚುವಂತೆ ಸಲಹೆ ನೀಡಿದ್ದಾರೆ. ಆದರೆ ಗುಣಮುಖವಾಗಿಲ್ಲ. ಕೈಗಳು ತುಂಬಾ ಸಿಡಿಯುತ್ತಿತ್ತು. ಇಂಜೆಕ್ಷನ್ ಕೊಟ್ಟ ಜಾಗ ಸೆಪ್ಟಿಕ್ ಆಗುತ್ತಾ ಹೋಗಿದೆ" ಎಂದು ತಿಳಿಸಿದ್ದಾರೆ.
ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಹಾವೇರಿ ತಾಲೂಕು ಆರೋಗ್ಯಾಧಿಕಾರಿ ಯುವತಿಗೆ ಧೈರ್ಯ ಹೇಳಿದ್ದಾರೆ. ಅಪರಿಚಿತ ವೈದ್ಯರ ಬಳಿ ಚಿಕಿತ್ಸೆ ಪಡೆಯದಂತೆ ತಿಳಿಸಿದ್ದಾರೆ. ಅಲ್ಲದೇ ತಪ್ಪಿತಸ್ಥ ವೈದ್ಯರ ವಿರುದ್ದ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ತಂದೆಗೆ ಚಿಕಿತ್ಸೆ ಕೊಡಿಸಲು ಬಂದು ಸಾವಿನ ಮನೆ ಸೇರಿದ ಮಗಳು: ಇಂಜೆಕ್ಷನ್ ಪಡೆದ ಮಹಿಳೆ ಕ್ಷಣಾರ್ಧದಲ್ಲೇ ಸಾವು ಆರೋಪ