ಹಾವೇರಿ: ಜಿಲ್ಲೆಯಲ್ಲಿ ಸೋಯಾಬೀನ್‌ಗೆ ಬೂದಿರೋಗ ಬಂದಿದ್ದು, ಅವಧಿಗೆ ಮುನ್ನವೇ ಕಾಳು ಬಿಟ್ಟಿದ್ದರಿಂದ ಕಾಳು ಬಲಿಯದೇ ಕೊಳೆಯಲಾರಂಭಿಸಿದೆ. ಕಾಳು ಮಾತ್ರವಲ್ಲದೆ ಬೆಳೆ ಸಹ ಕೊಳೆತಿದ್ದು, ರೈತರ ಜಾನುವಾರುಗಳಿಗೂ ಮೇವು ಇಲ್ಲದಂತಾಗಿದೆ. ಎಕರೆಗೆ 20 ಸಾವಿರಕ್ಕೂ ಅಧಿಕ ರೂಪಾಯಿ ಖರ್ಚು ಮಾಡಿದ್ದ ರೈತ ಕಂಗಾಲಾಗಿದ್ದಾನೆ.
ಹಾವೇರಿ ಜಿಲ್ಲೆಯ ಪ್ರಮುಖ ಬೆಳೆಗಳಲ್ಲಿ ಸೋಯಾಬೀನ್ ಕೂಡ ಒಂದು. ವರ್ಷದಿಂದ ವರ್ಷಕ್ಕೆ ಉತ್ತಮ ಬೆಲೆ ಮತ್ತು ಜಾನುವಾರುಗಳಿಗೆ ಮೇವು ಸಿಗುತ್ತಿದ್ದ ಕಾರಣ ಹೆಚ್ಚಿನ ರೈತರು ಸೋಯಾಬೀನ್ ಬೆಳೆಗೆ ಹೆಚ್ಚಿನ ಒತ್ತು ಕೊಟ್ಟಿದ್ದರು. ಹಾವೇರಿ ತಾಲೂಕಿನ ಕರ್ಜಗಿ ಗ್ರಾಮವೊಂದರಲ್ಲಿ ಸುಮಾರು 1,500 ಎಕರೆ ಜಮೀನಿನಲ್ಲಿ ಬೆಳೆಯಲಾಗಿದೆ. ಕಳೆದ ವರ್ಷ ಅಧಿಕ ಬೆಲೆ ಸಿಕ್ಕಿದ್ದರಿಂದ ರೈತರು ಸಂತಸದಲ್ಲಿದ್ದರು.
ಆದರೆ, ಈ ಬಾರಿ ಬೂದಿ ರೋಗ ಕಾಣಿಸಿಕೊಂಡಿದ್ದು, ಅವಧಿಗೆ ಮುನ್ನವೇ ಸೋಯಾಬೀನ್ ಬೆಳೆ ಬಂದಿದೆ. ಹೀಗಾಗಿ ಕಾಳುಗಳ ಗಾತ್ರ ಚಿಕ್ಕದಾಗಿದ್ದು, ಎಕರೆಗೆ 10 ಕ್ವಿಂಟಾಲ್ ಫಸಲು ನಿರೀಕ್ಷಿಸಿದ್ದ ರೈತರಿಗೆ ಆಘಾತ ಎದುರಾಗಿದೆ.
ಪರಿಹಾರಕ್ಕೆ ಆಗ್ರಹ:
'ಕಾಳುಗಳು ಮಾರಾಟವಾದರೆ ಅದರ ಹೊಟ್ಟು ಜಾನುವಾರುಗಳಿಗೆ ಮೇವಾಗುತ್ತಿತ್ತು. ಆದರೆ, ಸದ್ಯ ಕಾಳು ಕೂಡ ಕೈಗೆ ಸಿಗುವುದೂ ದೂರದ ಮಾತಾಗಿದೆ. ಗಿಡ ಪೂರ್ತಿ ಒಣಗಿ ಹೋಗಿದ್ದು, ಮೇವು ಸಹ ಸಿಗದಂತಾಗಿದೆ. ನಮ್ಮ ಜಿಲ್ಲೆಯವರೇ ಮುಖ್ಯಮಂತ್ರಿಗಳು ಹಾಗೂ ಕೃಷಿ ಸಚಿವರಿದ್ದಾರೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇತ್ತ ಗಮನ ಹರಿಸಿ ಹಾನಿಗೆ ಪರಿಹಾರ ನೀಡಬೇಕು' ಎಂದು ರೈತರು ಒತ್ತಾಯಿಸಿದ್ದಾರೆ.
ನೂರಾರು ಎಕರೆ ಬೆಳೆಗೆ ರೋಗ:
ಹಾವೇರಿ ತಾಲೂಕಿನ ಕರ್ಜಗಿ ಮಾತ್ರವಲ್ಲ, ನೂರಾರು ಗ್ರಾಮಗಳ ರೈತರ ಸೋಯಾಬೀನ್‌ಗೆ ಬೂದಿರೋಗ ಕಾಣಿಸಿಕೊಂಡಿದೆ. ಎಕರೆಗೆ 20 ಸಾವಿರ ರೂಪಾಯಿ ಖರ್ಚು ಮಾಡಿದ್ದ ರೈತ ಇದೀಗ ಹಾನಿಯ ಭೀತಿಯಲ್ಲಿದ್ದಾನೆ. ಕಷ್ಟಪಟ್ಟು ಬೆಳೆದ ಸೋಯಾಬೀನ್ ಅವಧಿಗೆ ಮುನ್ನವೇ ಫಸಲು ಕಾಣಿಸಿಕೊಂಡ ಪರಿಣಾಮ ಸರಿಯಾದ ಕಾಳು ಸಹ ಇಲ್ಲ. ಇತ್ತು ಜಾನುವಾರುಗಳಿಗೆ ಮೇವು ಇಲ್ಲದಂತಾಗಿದೆ. ಅಧಿಕಾರಿಗಳು ಜನಪ್ರತಿನಿಧಿಗಳು ರೈತನಿಗೆ ಸೂಕ್ತ ಪರಿಹಾರ ನೀಡುವ ಮೂಲಕ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕಿದೆ.
ಇದನ್ನೂ ಓದಿ: ಪಶ್ಚಿಮ ಬಂಗಾಳ ಪೊಲೀಸರಿಂದ ಬಂಧನಕ್ಕೆ ಒಳಗಾದ ಕಡಬದ ಯುವಕನಿಗೆ ಜಾಮೀನು ಮಂಜೂರು