ಹಾವೇರಿ: ಉಕ್ರೇನ್ ಮತ್ತು ರಷ್ಯಾ ಯುದ್ಧದ ಸಂದರ್ಭದಲ್ಲಿ ಸಾವನ್ನಪ್ಪಿದ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ್ನ ಮನೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಭೇಟಿ ನೀಡಿದರು.
ನವೀನ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ ಸಲೀಂ ಅಹ್ಮದ್, ಆತನ ತಂದೆ-ತಾಯಿ ಅಣ್ಣನಿಗೆ ಸಾಂತ್ವನ ಹೇಳಿದರು. ಅಲ್ಲದೆ, ಕುಟುಂಬಕ್ಕೆ ವೈಯಕ್ತಿಕವಾಗಿ ಸಲೀಂ ಅಹ್ಮದ್ ಒಂದು ಲಕ್ಷ ರೂಪಾಯಿ ಚೆಕ್ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸರ್ಕಾರವು ಆದಷ್ಟು ಬೇಗ ನವೀನ್ ಪಾರ್ಥೀವ ಶರೀರವನ್ನು ತರಬೇಕು ಎಂದು ಆಗ್ರಹಿಸಿದರು.
ಪೋಷಕರ ಪ್ರಮುಖ ಬೇಡಿಕೆ ಪಾರ್ಥೀವ ಶರೀರದ ಅಂತಿಮ ದರ್ಶನ ಮಾಡಬೇಕು ಎನ್ನುವುದಾಗಿದೆ. ಸರ್ಕಾರ ಇದಕ್ಕೆ ಅವಕಾಶ ಮಾಡಿಕೊಡಬೇಕು. ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರನ್ನು ದೇಶಕ್ಕೆ ಕರೆತರುವ ಕೆಲಸವಾಗಬೇಕು. ನಮ್ಮಲ್ಲಿನ ಶಿಕ್ಷಣ ವ್ಯವಸ್ಥೆ ಬದಲಾಗಬೇಕು ಎಂದು ನವೀನ್ ಸಾವು ರಾಜ್ಯಕ್ಕೆ ಒಂದು ಸಂದೇಶ ಕೊಟ್ಟಿದೆ ಎಂದು ಸಲೀಂ ಅಹ್ಮದ್ ತಿಳಿಸಿದರು.
ಸಿರಿಗೆರೆ ಶ್ರೀಗಳ ಭೇಟಿ: ನವೀನ್ ಮನೆಗೆ ಸಿರಿಗೆರೆ ಶ್ರೀಗಳು ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿ, ನವೀನ್ ಸಹೋದರ ಹರ್ಷನಿಗೆ ಧೈರ್ಯ ತುಂಬಿದರು.
ಬ್ಯಾಡಗಿಯ ಕುಶಾಲ ಸಂಕಣ್ಣನವರ್, ಚಳಗೇರಿ ಗ್ರಾಮದ ಅಮೀತ್ ಮತ್ತು ಸುಮನ್ಗೆ ಕರೆ ಮಾಡಿ ಮಾತನಾಡಿ, ಆದಷ್ಟು ಭೇಗ ನೀವು ಭಾರತಕ್ಕೆ ಮರಳಲಿದ್ದೀರಿ ಎಂದು ಸಿರಿಗೆರೆ ಶ್ರೀಗಳು ಧೈರ್ಯ ಹೇಳಿದರು.
ಇದನ್ನೂ ಓದಿ: ಉಕ್ರೇನ್ನಿಂದ ಸುರಕ್ಷಿತವಾಗಿ ಬಂದಿಳಿದ ಕೊಡಗಿನ ಕುವರಿ ಅಕ್ಷಿತಾ