ರಾಣೆಬೆನ್ನೂರು/ಹಾವೇರಿ: ಉಪ ಚುನಾವಣೆ ಹಿನ್ನೆಲೆ ಮಾಜಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಕೋಳಿವಾಡ ಪರ ಮತಯಾಚನೆ ಮಾಡಿದರು.
ಮಧ್ಯಾಹ್ನ ನಗರದ ತಾಲೂಕು ಕ್ರೀಡಾಂಗಣದಲ್ಲಿ ಮತ ಬೇಟೆ ಶುರು ಮಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮೇಡ್ಲೇರಿ, ಆರೇಮಲ್ಲಾಪುರ, ಐರಣಿ, ಹುಲಿಕಟ್ಟಿ ಗ್ರಾಮದಲ್ಲಿ ಪ್ರಚಾರ ನಡೆಸಿದರು. ಸಂಜೆ ವೇಳೆ ತಾಲೂಕಿನ ಕವಲೆತ್ತು ಗ್ರಾಮದಲ್ಲಿ ಊರಿನ ಗ್ರಾಮಸ್ಥರು ತಮ್ಮ ನೆಚ್ಚಿನ ನಾಯಕನ ಸ್ವಾಗತಿಸಲು ಸುಮಾರು 500 ಕೆಜಿ ಸೇಬಿನ ಹಾರ ಹಾಕಿ ಹಾಗೂ ವಿವಿಧ ಹೂಗಳ ಸುರಿಮಳೆ ಸುರಿಸುವ ಮೂಲಕ ಗ್ರಾಮಕ್ಕೆ ಸ್ವಾಗತ ಮಾಡಿದ್ರು.
ಹಾವೇರಿಯಲ್ಲಿ ಸಿದ್ದರಾಮಯ್ಯ ಪ್ರಚಾರ:
ಹಾವೇರಿ ಜಿಲ್ಲೆ ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣಾ ಕಣದಲ್ಲಿ ಬುಧವಾರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆ ಮಾಡಲಿದ್ದಾರೆ. ಮುಂಜಾನೆ ಹಿರೇಕೆರೂರಿನ ಬತ್ತಿಕೊಪ್ಪ ಕ್ರಾಸ್ಗೆ ಆಗಮಿಸುವ ಸಿದ್ದರಾಮಯ್ಯರನ್ನ ಬೈಕ್ ರ್ಯಾಲಿ ಮೂಲಕ ಹಿರೇಕೆರೂರಿಗೆ ಕರೆತರಲಾಗುತ್ತದೆ. ನಂತರ ಹಿರೇಕೆರೂರಿನಲ್ಲಿ ನಡೆಯುವ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ತೆರೆದ ವಾಹನದಲ್ಲಿ ಮತಯಾಚನೆ ಮಾಡಲಿದ್ದಾರೆ. ನಂತರ ರಟ್ಟಿಹಳ್ಳಿಯಲ್ಲಿ ನಡೆಯುವ ಬಹಿರಂಗ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಕ್ಷೇತ್ರದ ದೊಡ್ಡ ದೊಡ್ಡ ಗ್ರಾಮಗಳಲ್ಲಿ ತೆರದ ವಾಹನದಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ ಅಭ್ಯರ್ಥಿ ಬಿ.ಹೆಚ್.ಬನ್ನಿಕೋಡ್ ಪರ ಮತಯಾಚನೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಹೆಚ್.ಕೆ.ಪಾಟೀಲ್, ಸಿ.ಎಂ.ಇಬ್ರಾಯಿಂ, ರುದ್ರಪ್ಪ ಲಮಾಣಿ, ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಮುಖಂಡರು ಸಾಥ್ ನೀಡಲಿದ್ದಾರೆ.