ಹಾವೇರಿ : ಅನೈತಿಕ, ವಚನ ಭ್ರಷ್ಟ ಹಾಗೂ ಜನವಿರೋಧಿ ಸರ್ಕಾರ ಕರ್ನಾಟಕದಲ್ಲಿದೆ. ಬಿಜೆಪಿಯವರು ಬಂದ ಮೇಲೆ ಲೂಟಿ ಆಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದೂರಿದರು. ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಪ್ರಜಾಶಕ್ತಿ ಬಹಿರಂಗ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕದ ಇತಿಹಾಸದಲ್ಲಿ 40% ಲಂಚ ತೆಗೆದುಕೊಳ್ಳುವ ಸರ್ಕಾರ ಬಂದಿರಲಿಲ್ಲ. ಇದಕ್ಕೆ ಪ್ರತಿಯಾಗಿ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತರಿಗೆ ಸಿಕ್ಕಿಬಿದ್ದಿರುವ ಶಾಸಕ ವಿರೂಪಾಕ್ಷಪ್ಪ ಅವರ ಮನೆಯಲ್ಲಿ ಅಕ್ರಮ ಹಣ ಸಿಕ್ಕಿದೆ. ಇದಕ್ಕಿಂತ ಸಾಕ್ಷಿ ಬೇಕಾ ಬೊಮ್ಮಾಯಿ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಬೊಮ್ಮಾಯಿಗೆ ನೈತಿಕತೆ ಇಲ್ಲ: ಬೊಮ್ಮಾಯಿ ಒಬ್ಬ ಬಂಡ, ಜನರಿಗೆ ಸುಳ್ಳು ಹೇಳಿದ್ದೇನೆ ಎಂದು ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕಿತ್ತು. ಆದರೆ ವಿರೂಪಾಕ್ಷಪ್ಪನನ್ನು ರಕ್ಷಣೆ ಮಾಡಿದರು. ಮಾಡಾಳ್ ಹೇಳುತ್ತಾನೆ ನಾನು ಮನೆಯಲ್ಲೇ ಇದ್ದೆ ಅಂತ. ಆದರೂ ಬಂಧನ ಮಾಡಲಿಲ್ಲ. ಗೃಹ ಮಂತ್ರಿಗಳ ಆದೇಶ ಇತ್ತು, ಅದಕ್ಕೆ ಬಂಧನ ಮಾಡಲಿಲ್ಲ. ಸಿಎಂ ಬೊಮ್ಮಾಯಿ ನಿಮಗೆ ಇದರ ಬಗ್ಗೆ ಮಾತಾಡೋಕೆ ಒಂದು ಸೆಕೆಂಡ್ ಕೂಡಾ ನೈತಿಕತೆ ಇಲ್ಲ. ರಾಜೀನಾಮೆ ಕೊಟ್ಟು ಹೋಗಬೇಕಿತ್ತು ಎಂದು ವಾಗ್ದಾಳಿ ನಡೆಸಿದರು.
ಅಮಿತ್ ಶಾ ಫಿಕ್ಸ್ ಮಾಡಿರಬೇಕು: ವಿಧಾನಸೌಧಕ್ಕೆ ಕಿವಿ ಕೊಟ್ಟರೆ ಲಂಚ ಲಂಚ ಎಂದು ಪಿಸುಗುಟ್ಟುತ್ತದೆ. ಯಾವ ಕಚೇರಿಗೆ ಹೋದರೂ ಲಂಚ ಕೇಳುತ್ತಾರೆ. ಲಂಚ ಇಲ್ಲದೇ ಯಾವ ಕೆಲಸವೂ ನಡೆಯುವುದಿಲ್ಲ. ಬಹುಶಃ ಇದನ್ನು ಅಮಿತ್ ಶಾ ಅವರೇ ಫಿಕ್ಸ್ ಮಾಡಿದ್ದು. ಎಂಎಲ್ಎ, ಎಂಪಿಗಳಿಗೆ ಹೇಳಿ ಇಷ್ಟು ಕಲೆಕ್ಷನ್ ಮಾಡಿ ಎಂದಿರಬೇಕು ಎಂದು ಹೇಳಿದರು.
ಕಾಂಗ್ರೆಸ್ ಅಧಿಕಾರಕ್ಕೆ: ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬಾರದು. ಏಕೆಂದರೆ ರಾಜ್ಯ ಉಳಿಯುವುದಿಲ್ಲ. ನಾವು ಅಡುಗೆ ಮಾಡಿದ ಮೇಲೆ ಬಡಿಸೋಕೆ ಬರುವ ಗಿರಾಕಿಗಳು ಇವರೆಲ್ಲ. ನಾವು ಒಂದೇ ಒಂದು ಭರವಸೆ ಈಡೇರಿಸಲಿಲ್ಲ ಎಂದರೆ ಒಂದು ಸೆಕೆಂಡ್ ಕೂಡಾ ಅಧಿಕಾರದಲ್ಲಿ ಇರುವುದಿಲ್ಲ. ಪೂರ್ವಕ್ಕೆ ಸೂರ್ಯ ಹುಟ್ಟೋದು ಎಷ್ಟು ಸತ್ಯವೋ, ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಅಷ್ಟೇ ಸತ್ಯ ಎಂದು ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ: ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಹೆಚ್ಡಿಕೆ ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ಕುಳಿತು ಆಡಳಿತ ನಡೆಸಿದ್ರು: ಸಿದ್ದರಾಮಯ್ಯ