ಹಾವೇರಿ: ಕಾಂಗ್ರೆಸ್‌ನ ಮಾಜಿ ಪ್ರಧಾನಿ ದಿ. ಜವಾಹರ್ಲಾಲ್ ನೆಹರು ಹಲವಾರು ಸಂಸ್ಥೆಗಳನ್ನು ಕಟ್ಟಿದ್ದರು. ಹಾಲಿ ಬಿಜೆಪಿಯ ಪ್ರಧಾನಿ ನರೇಂದ್ರ ಮೋದಿ ಅವುಗಳನ್ನು ಮಾರಾಟ ಮಾಡಿದರು. ಇದೇ ನೆಹರು ಮತ್ತು ಮೋದಿ ನಡುವಿನ ವ್ಯತ್ಯಾಸವೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಅವರು ಅಭಿಪ್ರಾಯಪಟ್ಟಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 8 ವರ್ಷಗಳ ಕಾಲ ಸುಳ್ಳು ಹೇಳಿ ಅಧಿಕಾರ ನಡೆಸಿರುವುದೇ ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆ. ಎಲ್ಲ ದಿನ ಭಾನುವಾರವಾಗುವುದಿಲ್ಲ, ಎಷ್ಟಂತ ಜನರಿಗೆ ಯಾಮಾರಿಸುತ್ತೀರಾ? ಎಂದು ಅವರು ಪ್ರಶ್ನಿಸಿದರು. ಜನ ನರೇಂದ್ರ ಮೋದಿ ಮೇಲೆ ವಿಶ್ವಾಸವಿಟ್ಟು ಅಧಿಕಾರ ನೀಡಿದರು. ಆದರೆ, ನರೇಂದ್ರ ಮೋದಿ ಭಾಷಣಗಳ ಮೂಲಕ ಜನರ ಹೊಟ್ಟೆ ತುಂಬಿಸುವ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಿದರು.
ಜನರಿಗೆ ಬಿಜೆಪಿಯಿಂದ ಭ್ರಮನಿರಶನವಾಗಿದೆ. ಹಿಮಾಚಲ ಪ್ರದೇಶದ ಚುನಾವಣೆ ಬಂದಿದ್ದರಿಂದ ಪೆಟ್ರೋಲ್ ಡೀಸೆಲ್ ಬೆಲೆ ಇಳಿಸಿದ್ದಾರೆ. ಜೂನ್ ಎರಡು ಮತ್ತು ಮೂರರಂದೇ ಕೆಪಿಸಿಸಿ ವತಿಯಿಂದ ನವಸಂಕಲ್ಪ ಶಿಬಿರ ಏರ್ಪಡಿಸಿರುವುದಾಗಿ ತಿಳಿಸಿದರು. ಇದರಲ್ಲಿ 400 ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ರಾಜಸ್ಥಾನದ ಜೋದ್ಪುರದಲ್ಲಿ ನಡೆದಂತೆ ರಾಜ್ಯದಲ್ಲೂ ಸಹ ನವಸಂಕಲ್ಪ ಶಿಬಿರ ನಡೆಯಲಿದೆ ಎಂದು ತಿಳಿಸಿದರು. ಕೇಂದ್ರ ಮುಖಂಡರು ಮತ್ತು ರಾಜ್ಯದ ಮುಖಂಡರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಲೀಂ ಅಹ್ಮದ್ ತಿಳಿಸಿದರು.
ಕಾಂಗ್ರೆಸ್ ಪಕ್ಷ ಭಾರತದ ಜೋಡೋ ಮೂಲಕ ದೇಶ ಒಗ್ಗೂಡಿಸುವ ಕೆಲಸ ಮಾಡುತ್ತಿದ್ದೇವೆ. ಬಿಜೆಪಿಯವರು ಭಾರತ ತೋಡೋ ಬೇರ್ಪಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸಲೀಂ ಅಹ್ಮದ್ ಆರೋಪಿಸಿದರು. ಬಸವರಾಜ ಹೊರಟ್ಟಿ ವಿಧಾನಪರಿಷತ್‌ಗೆ ಏಳು ಬಾರಿ ಆಯ್ಕೆಯಾಗುವ ಮೂಲಕ ದಾಖಲೆ ಮಾಡಿದ್ದಾರೆ. ಅವರು ಸೋಲಿನಭೀತಿಯಿಂದ ಅಥವಾ ಅಧಿಕಾರದ ಆಸೆಯಿಂದ ಪಕ್ಷ ಬದಲಾವಣೆ ಮಾಡಿದ್ದಾರೆ ಎಂದು ಸಲೀಂ ಅಹ್ಮದ್ ಆರೋಪಿಸಿದರು.
ಹೊರಟ್ಟಿ ಏಳು ಬಾರಿ ಜಾತ್ಯಾತೀತ ಮತಗಳನ್ನು ಪಡೆದು ಪರಿಷತ್‌ಗೆ ಆಯ್ಕೆಯಾಗುತ್ತಿದ್ದರು. ಇವತ್ತು ಪಕ್ಷ ಬದಲಾವಣೆ ಮಾಡಿ ಭ್ರಷ್ಟ ಭಾರತೀಯ ಜನತಾ ಪಕ್ಷ ಸೇರಿದ್ದಾರೆ ಎಂದು ಸಲೀಂ ಅಹ್ಮದ್ ಅವರು ಲೇವಡಿ ಮಾಡಿದರು. ಜೀವನವಿಡಿ ಜಾತ್ಯತೀತ ಮತಗಳಿಂದ ವಿಜಯಶಾಲಿಯಾಗಿ ಈಗ ಕೋಮುವಾದಿ ಪಕ್ಷಕ್ಕೆ ಯಾಕೆ ಸೇರಿದ್ದಾರೆ ಎಂಬುದನ್ನು ಅವರೇ ಉತ್ತರಿಸಬೇಕು ಎಂದರು.
ಬೇರೆ ಮೂಲ ಹುಡುಕುವುದು ಬಿಟ್ಟು ತಮ್ಮ 40 ಪರ್ಸೆಂಟೇಜ್ ಭ್ರಷ್ಟಾಚಾರದ ಮೂಲ ಹುಡುಕುವುದು ಒಳಿತು. ದಿನಬೆಳಗಾದರೆ ಸಮಾಜವನ್ನ ಒಡೆಯುವ ಕೆಲಸವನ್ನ ಬಿಜೆಪಿಯವರು ಮಾಡುತ್ತಿದ್ದಾರೆ. ಸಮಾಜ ಒಡೆಯುವ ಶಕ್ತಿಗಳ ವಿರುದ್ಧ ಸರ್ಕಾರ ಕೆಲಸ ಮಾಡಬೇಕು. ಸಮಾಜದಲ್ಲಿ ಎಲ್ಲರೂ ಅನ್ಯೋನ್ಯವಾಗಿ ಜೀವಿಸುವ ವಾತಾವರಣ ನಿರ್ಮಿಸುವ ಕರ್ತವ್ಯ ಸರ್ಕಾರದ್ದು ಎಂದು ಸಲೀಂ ಅಹ್ಮದ್ ಅವರು ಅಭಿಪ್ರಾಯಪಟ್ಟರು.