ರಾಣೆಬೆನ್ನೂರು: ನಗರಸಭಾ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಕಾವು ದಿನದಿಂದ ದಿನಕ್ಕೆ ಜೋರಾಗುತ್ತಿದ್ದು, ಅಧ್ಯಕ್ಷ ಗದ್ದುಗೆ ಹಿಡಿಯಲು ಕೆ.ಬಿ.ಕೋಳಿವಾಡರು ತೆರೆಮರೆಯಲ್ಲಿ ಯೋಜನೆ ರೂಪಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ರಾಣೆಬೆನ್ನೂರು ನಗರಸಭಾ ಚುನಾವಣೆ ನಡೆದು ಎರಡು ವರ್ಷಗಳ ನಂತರ ಅಂತಿಮವಾಗಿ ಸರ್ಕಾರ ಮೀಸಲು ಪ್ರಕಟಿಸಿದೆ.
ಸದ್ಯ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗದ ಮಹಿಳೆಗೆ ಮೀಸಲಾಗಿದ್ದು, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಕಾಯ್ದಿರಿಸಲಾಗಿದೆ. ಸದ್ಯ ನಗರಸಭೆಯಲ್ಲಿ ಒಟ್ಟು 35 ಸದಸ್ಯರಿದ್ದು ಬಿಜೆಪಿ-15, ಕಾಂಗ್ರೆಸ್-9, ಕೆಪಿಜೆಪಿ-10 ಹಾಗೂ ಪಕ್ಷೇತರ ಒಬ್ಬರಿದ್ದಾರೆ. ನಗರಸಭಾ ಅಧಿಕಾರ ಪಡೆಯಲು 19 ಸದಸ್ಯರ ಸಂಪೂರ್ಣ ಬಹುಮತಬೇಕಾಗಿದೆ. ಆದರೆ ಕೆಪಿಜೆಪಿ, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಗೆ ಬಹುಮತವಿಲ್ಲ. ಇದರಿಂದ ಇನ್ನಿತರ ಪಕ್ಷದ ಸದಸ್ಯರನ್ನು ಸೆಳೆದುಕೊಂಡು ಅಧಿಕಾರ ಏರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮಾಜಿ ವಿಧಾನಸಭಾ ಅಧ್ಯಕ್ಷರಾದ ಕೆ.ಬಿ.ಕೋಳಿವಾಡರು ಎರಡು ಬಾರಿ ಸೋಲು ಕಂಡಿದ್ದಾರೆ. ಆದರೆ ಕ್ಷೇತ್ರದಲ್ಲಿ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳುವ ಸಲುವಾಗಿ ನಗರಸಭಾ ಅಧಿಕಾರ ಪಡೆಯಲು ಚಿಂತಿಸುತ್ತಿದ್ದಾರೆ ಎನ್ನಲಾಗಿದೆ. ಸದ್ಯ ಕಾಂಗ್ರೆಸ್ 8 ಜನ ಸದಸ್ಯರನ್ನು ಹೊಂದಿದ್ದು ಅಧಿಕಾರ ಪಡೆಯಲು ಇನ್ನೂ 11 ಸದಸ್ಯರು ಅವಶ್ಯಕತೆ ಇದೆ. ಇದನ್ನು ಅರಿತಿರುವು ಕೋಳಿವಾಡರು 10 ಕೆಪಿಜೆಪಿ ಸದಸ್ಯರನ್ನು ಹಾಗೂ ಓರ್ವ ಪಕ್ಷೇತರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.
ಸದ್ಯ 15 ಜನ ಸದಸ್ಯರನ್ನು ಹೊಂದಿರುವ ಬಿಜೆಪಿ ಪಕ್ಷ ಅಧಿಕಾರ ಪಡೆಯಲು ಸನಿಹದಲ್ಲಿದೆ. ಇವರಿಗೆ ಇಬ್ಬರೂ ಕೆಪಿಜೆಪಿ ಸದಸ್ಯರು ಹಾಗೂ ಶಾಸಕ ಮತ್ತು ಸಂಸದ ಸೇರಿದರೆ ನಗರಸಭಾ ಅಧಿಕಾರ ದೊರೆಯುತ್ತದೆ. ಆದರೆ ಹಿಂದುಳಿದ ವರ್ಗದ ಮಹಿಳೆಗೆ ಅಧ್ಯಕ್ಷ ಸ್ಥಾನ ಇರುವುದರಿಂದ ಆಕಾಂಕ್ಷಿಗಳ ದಂಡು ಹೆಚ್ಚಾಗಿದೆ. ಇದರಿಂದ ಬಿಜೆಪಿಯಲ್ಲಿ ಸದ್ಯ ಮೂರು ಬಣಗಳಾಗಿ ಮಾರ್ಪಟ್ಟಿದ್ದು ಸದಸ್ಯರು ಯಾರು ಕಡೆ ವಾಲುತ್ತಾರೆ ಎಂಬುದು ಗೌಪ್ಯವಾಗಿದೆ.