ರಾಣೆಬೆನ್ನೂರು: ರಾಜ್ಯ ಸೇರಿದಂತೆ ಹೊರ ರಾಜ್ಯಗಳಲ್ಲಿ ನಡೆದ ಹೋರಿ ಸ್ಪರ್ಧೆಗಳಲ್ಲಿ ಪ್ರಸಿದ್ಧಿ ಪಡೆದಿದ್ದ 'ರಾಣೆಬೆನ್ನೂರು ಹುಲಿ' ಎಂಬ ಹೆಸರಿನ ಹೋರಿ ಅನಾರೋಗ್ಯದಿಂದ ಮೃತಪಟ್ಟು ಒಂದು ತಿಂಗಳು ಕಳೆದಿದೆಯಷ್ಟೇ. ಆದರೀಗ ಮತ್ತೊಂದು ಹೋರಿಯೂ ಮೃತಪಟ್ಟಿದ್ದು ಮಾಲೀಕ ಅನಾಥರಾಗಿದ್ದಾರೆ.
ರಾಣೆಬೆನ್ನೂರು ನಗರದ ಕುರಬಗೇರಿ ನಿವಾಸಿ ದೆವ್ವ ಮರಿಯಪ್ಪ ಗುದಿಗೇರ ಎಂಬುವರು ಸಾಕಿದ 'ರಾಣೆಬೆನ್ನೂರು ಡಾನ್' ಎಂಬ ಕಲ್ಲು ಜಗ್ಗುವ/ಎಳೆಯುವ ಹೋರಿ ಮೃತಪಟ್ಟಿದೆ.
ಇದನ್ನೂ ಓದಿ: 'ರಾಣೆಬೆನ್ನೂರು ಹುಲಿ' ನಿಧನ: ನೆಚ್ಚಿನ ಹೋರಿಯ ಅಗಲಿಕೆಗೆ ಸಾವಿರಾರು ಜನರ ಕಣ್ಣೀರ ವಿದಾಯ!
ಈ ಹೋರಿ ಸುಮಾರು 10 ವರ್ಷದಿಂದ ವಿವಿಧ ಕಡೆ ನಡೆಯುವ ಕಲ್ಲು ಎಳೆಯುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿತ್ತು. ಹಾವೇರಿ ಸೇರಿದಂತೆ ರಾಣೆಬೆನ್ನೂರು ನಗರದಲ್ಲಿ ನಡೆಯುವ ಹಬ್ಬ ಹರಿದಿನಗಳಲ್ಲಿ ಈ ಹೋರಿ ಸುಮಾರು ಹತ್ತರಿಂದ ಇಪ್ಪತ್ತು ಕ್ವಿಂಟಾಲ್ ತೂಕದ ಕಲ್ಲು ಎಳೆಯುವ ಮೂಲಕ ಹೆಸರು ಮಾಡಿತ್ತು. ಆದರೆ ಇದೀಗ ಈ ಹೋರಿಯೂ ಮೃತಪಟ್ಟಿದ್ದು, ದೆವ್ವ ಮರಿಯಪ್ಪ ಕಂಗಾಲಾಗಿದ್ದಾರೆ.
ಹೆಂಡತಿ, ಹೋರಿಗಳನ್ನು ಕಳೆದುಕೊಂಡ ದೆವ್ವ ಮರಿಯಪ್ಪ:
ದೆವ್ವ ಮರಿಯಪ್ಪ ಪ್ರೀತಿಯಿಂದ ಎರಡು ಹೋರಿಗಳನ್ನು ಸಾಕಿದ್ದರು. ಇವು ವಿವಿಧ ಸ್ಪರ್ಧೆಯ ಮೂಲಕ ರಾಜ್ಯಾದ್ಯಂತ ದೆವ್ವ ಮರಿಯಪ್ಪರ ಹೋರಿಗಳು ಎಂದು ಹೆಸರಾಗಿದ್ದವು. ಆದರೀಗ ಹೋರಿಗಳು ಸೇರಿದಂತೆ ಪತ್ನಿಯನ್ನು ಕಳೆದುಕೊಂಡು ದೆವ್ವ ಮರಿಯಪ್ಪ ಅನಾಥರಾಗಿದ್ದಾರೆ.