ರಾಣೆಬೆನ್ನೂರು: ಹಿರೆಕೇರೂರು ಕ್ಷೇತ್ರದ ಶಾಸಕನಾಗಿ, ಸಚಿವನಾಗಿದ್ದೇನೆ. ಆದರೆ ರಾಣೆಬೆನ್ನೂರು-ಹಿರೆಕೇರೂರು ನನಗೆ ಎರಡು ಕಣ್ಣುಗಳು ಇದ್ದಂತೆ ಎಂದು ನೂತನ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ರಾಣೆಬೆನ್ನೂರಿನ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಸನ್ಮಾನ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾಗೂ ವಾಣಿಜ್ಯ ಕ್ಷೇತ್ರವಾಗಿ ರಾಣೆಬೆನ್ನೂರು ಇದೆ. ಇಲ್ಲಿನ ವರ್ತಕರು ಹೆಚ್ಚಾಗಿ ನಮ್ಮ ಹಿರೆಕೇರೂರು ತಾಲೂಕಿನವರು. ಈ ಕಾರಣದಿಂದ ನನಗೆ ರಾಣೆಬೆನ್ನೂರು ಕ್ಷೇತ್ರ ಏನು ದೂರಲ್ಲ ಎಂದು ಹೇಳಿದರು.
ರಾಣೆಬೆನ್ನೂರು ಕ್ಷೇತ್ರಕ್ಕೆ ತರಕಾರಿ ಹಾಗೂ ಹಣ್ಣುಹಂಪಲು ಸಂರಕ್ಷಿಸಲು ಶೀತಲ ಘಟಕ ಸ್ಥಾಪನೆ ಮಾಡಬೇಕು ಎಂಬುದು ಬಹು ದೊಡ್ಡ ಬೇಡಿಕೆಯಾಗಿದೆ. ಇದರ ಬಗ್ಗೆ ಸರ್ಕಾರ ಹಾಗೂ ಮುಖ್ಯಮಂತ್ರಿ ಹತ್ತಿರ ಚರ್ಚೆ ಮಾಡಿ ಕೋಲ್ಡ್ ಸ್ಟೋರೆಜ್ ಘಟಕ ಸ್ಥಾಪನೆ ಮಾಡಲು ಮುಂದಾಗುವೆ ಎಂದು ಭರವಸೆ ನೀಡಿದರು.
ಹಿರೆಕೇರೂರು ಹಾಗೂ ರಾಣೆಬೆನ್ನೂರು ತಾಲೂಕಿನ ರೈತರಿಗೆ ಕಿಸಾನ್ ಸಮ್ಮಾನ್ ಯೋಜನಡಿಯಲ್ಲಿ ಪ್ರೋತ್ಸಾಹ ಧನದ ಮೊತ್ತ ಬಾಕಿ ಉಳಿದಿರುವುದು ಕಂಡು ಬಂದಿದೆ. ಇದರ ಬಗ್ಗೆ ಅಧಿಕಾರಿಗಳ ಜತೆ ಚರ್ಚೆಸಿ ಸುಮಾರು ಒಂದೂವರೆ ಲಕ್ಷ ಜನಕ್ಕೆ ಹಣ ಬಿಡುಗಡೆ ಮಾಡಲು ಆದೇಶ ಮಾಡಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಶಾಸಕ ಅರುಣ ಕುಮಾರ್ ಪೂಜಾರ, ಸಂತೋಷ ಪಾಟೀಲ್, ವಿಶ್ವನಾಥ್ ಪಾಟೀಲ್, ಚೋಳಪ್ಪ ಕಸವಾಳ, ಭಾರತಿ ಜಂಬಗಿ, ಭಾರತಿ ಅಳವಂಡಿ ಸೇರಿದಂತೆ ಇತರರು ಭಾಗಿಯಾಗಿದ್ದರು.