ಹಾವೇರಿ : ಜಿಲ್ಲೆಯ ರಾಘವೇಂದ್ರ ಮಠದಲ್ಲಿ ರಾಯರ 351ನೇ ಅರಾಧನಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಆರಾಧನಾ ಮಹೋತ್ಸವದ ಮೂರನೇಯ ದಿನವಾದ ಇಂದು ಉತ್ತರಾಧನೆ ಅಂಗವಾಗಿ ರಾಯರ ಮಹಾರಥೋತ್ಸವ ನೆರವೇರಿತು. ರಾಘವೇಂದ್ರ ಮಠದಿಂದ ಆರಂಭವಾದ ರಥೋತ್ಸವ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ನಂತರ ತೇರುಬೀದಿ ಆಂಜನೇಯ ದೇವಸ್ಥಾನದಿಂದ ಮಠಕ್ಕೆ ಮರಳಿತು.
ರಾಘವೇಂದ್ರ ಶ್ರೀಗಳ ಬೆಳ್ಳಿಯ ಮೂರ್ತಿಯನ್ನು ರಥದಲ್ಲಿಟ್ಟು ಪೂಜೆ ಸಲ್ಲಿಸಲಾಯಿತು. ರಥ ಸಾಗಿಬಂದ ದಾರಿಯುದ್ದಕ್ಕೂ ಭಕ್ತರು ಹಣ್ಣುಕಾಯಿಗಳನ್ನ ಅರ್ಪಿಸಿ ಧನ್ಯತೆ ವ್ಯಕ್ತಪಡಿಸಿದರು. ರಾಯರ ರಥಕ್ಕೆ ಹೂಹಾರ ಮತ್ತು ತಳಿರು ತೋರಣಗಳ ಅಲಂಕಾರ ಮಾಡಲಾಗಿತ್ತು.
ಉತ್ತರಾಧನೆ ಅಂಗವಾಗಿ ಮಠದಲ್ಲಿ ವೃಂದಾನವನಕ್ಕೆ ವಿವಿಧ ಪೂಜೆಗಳನ್ನ ಸಲ್ಲಿಸಲಾಯಿತು. ಉತ್ತರಾಧನೆ ನೈರ್ಮಲ್ಯ ವಿಸರ್ಜನೆ, ಪಂಚಾಮೃತ ಅಷ್ಟೋದರ ಹಸ್ತೋದಕ ಅನ್ನಪೂರ್ಣೆ ಪೂಜೆ ನಡೆಸಲಾಯಿತು. ಮೂರು ದಿನಗಳ ಕಾಲ ಭಕ್ತರು ಆಗಮಿಸಿ ಕಲಿಯುಗದ ಕಾಮಧೇನುವಿನ ದರ್ಶನ ಪಡೆದರು.
ರಾಯರು ಸಶರೀರವಾಗಿ ವೃಂದವನಾ ಪ್ರವೇಶಿಸಿದ ನಂತರ ಮೂರನೇಯ ವೃಂದಾವನ ಹಾವೇರಿ ನಗರದ್ದಾಗಿದೆ. ಮಂತ್ರಾಲಯದಲ್ಲಿ ರಾಯರ 351ನೇ ಅರಾಧನೆ ನಡೆದರೆ, ಹಾವೇರಿ ರಾಘವೇಂದ್ರ ಮಠದಲ್ಲಿ 311ನೇ ಅರಾಧನಾ ಮಹೋತ್ಸವ ಆಚರಿಸಲಾಗುತ್ತಿದೆ ಎಂದು ಮಠದ ಧರ್ಮಾಧಿಕಾರಿ ಹರಿಕೃಷ್ಣ ತಿಳಿಸಿದರು.
ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗಳ ಮೊದಲ ಮಠ ಸ್ಥಾಪನೆಯಾಗಿದ್ದರೆ, ಎರಡನೇಯ ಮಠ ಮತ್ತು ರಾಜ್ಯದಲ್ಲಿ ರಾಘವೇಂದ್ರರ ಮೊದಲ ಮಠ ಹಾವೇರಿಯಲ್ಲಿ ಸ್ಥಾಪನೆಯಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಐತಿಹಾಸಿಕ ಹಿನ್ನೆಲೆ ಇರುವ ಹಾವೇರಿಯ ರಾಯರ ಮಠಕ್ಕೆ ಆರಾಧನಾ ಮಹೋತ್ಸವದ ಮೂರು ದಿನಗಳ ಕಾಲ ಭಕ್ತ ಸಾಗರ ಹರಿದು ಬಂದಿತ್ತು.
ಇದನ್ನೂ ಓದಿ : ಕೃಷ್ಣರಾಜಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಂಸದೆ ಸುಮಲತಾ