ಹಾವೇರಿ : ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರವು ಅಕ್ಕಿ ಬದಲು ಹಣ ಕೊಡುವುದಕ್ಕೆ ಸಾರ್ವಜನಿಕರು ವಿರೋಧ ಮಾಡುತ್ತಿದ್ದಾರೆ ಎಂಬ ವಿಚಾರ ಸುಳ್ಳು ಅಂತಾ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಹೇಳಿದರು.
ಹಾವೇರಿಯಲ್ಲಿ ಮಾತನಾಡಿದ ಅವರು, ಸದ್ಯದ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿಲ್ಲ. ಹೀಗಾಗಿ, ಹಣ ನೀಡುತ್ತಿದ್ದೇವೆ. ಮಾರುಕಟ್ಟೆಯಲ್ಲಿರುವ ಅಕ್ಕಿ ಖರೀದಿಗೆ ಏನೂ ತೊಂದರೆ ಇಲ್ಲ, ಇದರಿಂದ ಜನರು ಸಂತೃಪ್ತರಾಗುತ್ತಾರೆ ಎಂಬ ಉದ್ದೇಶದಿಂದ ಯೋಜನೆ ಜಾರಿಗೆ ತಂದಿದ್ದೇವೆ. ಎಲ್ಲಾ ಗ್ಯಾರಂಟಿ ಘೋಷಣೆಗಳನ್ನು ಒಂದೊಂದಾಗಿ ಜಾರಿಗೆ ತರುತ್ತೇವೆ, ನಮ್ಮ ಬಜೆಟ್ ಇನ್ನೂ ಮಂಡನೆ ಆಗಿಲ್ಲ ಎಂದು ತಿಳಿಸಿದರು.
ಗ್ಯಾರಂಟಿ ಹೆಸರಿನಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಣ ನೀಡುತ್ತಿಲ್ಲ ಎಂಬ ವಿಚಾರ ಸತ್ಯಕ್ಕೆ ದೂರವಾದದ್ದು. ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡುವ ಕುರಿತು ಚರ್ಚೆ ಮಾಡಲಾಗುತ್ತಿದೆ. ಅಭಿವೃದ್ಧಿ ಕಾರ್ಯಗಳಿಗೆ ಹಣ ತಡೆ ಹಿಡಿಯುವ ಪ್ರಮೆಯವೇ ಇಲ್ಲ. ಕ್ಯಾಬಿನೆಟ್ನಲ್ಲಿ ಮುಖ್ಯಮಂತ್ರಿಗಳು ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡುವಂತೆ ಹೇಳಿದ್ದಾರೆ ಎಂದರು.
ಗೋಹತ್ಯೆ ನಿಷೇಧ, ಮತಾಂತರ ನಿಷೇಧ ಕಾಯ್ದೆ ವಾಪಸ್ ಪಡೆಯದಂತೆ ಕರಾವಳಿ ಸ್ವಾಮೀಜಿಗಳ ಒತ್ತಾಯದ ಕುರಿತು ಮಾತನಾಡಿದ ಅವರು, ಈ ವಿಚಾರದ ಕುರಿತು ಪ್ರತಿಕ್ರಿಯೆ ಕೊಡುವ ಅವಶ್ಯಕತೆ ಇಲ್ಲ ಎಂದರು. ಬಳಿಕ, ಏಕರೂಪ ನಾಗರಿಕ ಸಂಹಿತೆ ಜಾರಿ ಕುರಿತು ನನ್ನ ಗಮನಕ್ಕೆ ಬಂದಿಲ್ಲ. ಆ ಕುರಿತಂತೆ ಮಾತನಾಡುವ ಅವಶ್ಯಕತೆ ಏನಿದೆ ಎಂದು ತಿಳಿಸಿದರು.
ಇದನ್ನೂ ಓದಿ : Annabhagya Scheme: ಅನ್ನಭಾಗ್ಯ ಯೋಜನೆಯ ಪ್ರಕ್ರಿಯೆ ಇಂದಿನಿಂದ ಆರಂಭ.. ಜುಲೈ 10ರ ನಂತರ 5 ಕೆಜಿ ಅಕ್ಕಿ ಬದಲು ಬ್ಯಾಂಕ್ಗೆ ಹಣ ಜಮೆ
ಇನ್ನು ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಗೆ ಪ್ರಕ್ರಿಯೆಗಳಿಗೆ ಇಂದಿನಿಂದ ಚಾಲನೆ ದೊರೆತಿದೆ. ಬಿಪಿಎಲ್ ಪಡಿತರದಾರರಿಗೆ ಜುಲೈ 10 ರಿಂದ 5 ಕೆ.ಜಿ ಅಕ್ಕಿ ಬದಲಿಗೆ 170 ರೂಪಾಯಿ ಹಣ ಹಾಕುವ ಪ್ರಕ್ರಿಯೆ ಆರಂಭವಾಗಲಿದೆ. ಫಲಾನುಭವಿಗಳಿಗೆ ತಕ್ಷಣಕ್ಕೆ ಇದರ ಅನುಕೂಲ ಅರಿವಿಗೆ ಬಾರದಿರಬಹುದು. ಆದರೆ, ಪ್ರಕ್ರಿಯೆಗೆ ಅಧಿಕೃತ ಚಾಲನೆ ದೊರಕಿರುವುದರಿಂದ ಎಂಟತ್ತು ದಿನಗಳಲ್ಲಿ ಲಾಭ ಸಿಗಲಿದೆ.
ಅಕ್ಕಿ ಬದಲಿಗೆ ಹಣ ನೀಡುವ ಯೋಜನೆ ಆರಂಭಗೊಳ್ಳುತ್ತಿದ್ದರೂ ಸಹ ಒಂದೇ ದಿನದಲ್ಲಿ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡುವುದು ಕಷ್ಟ. ಹಂತ ಹಂತವಾಗಿ ಹಣ ವರ್ಗಾವಣೆ ಆಗಲಿದೆ. ಇದಕ್ಕಾಗಿ, ಫಲಾನುಭವಿಗಳ ರೇಷನ್ ಕಾರ್ಡ್ ಸಂಖ್ಯೆ, ಆಧಾರ್ ಮತ್ತು ಬ್ಯಾಂಕ್ ಖಾತೆ ಜೋಡಣೆ ಆಗಿರಬೇಕಾಗುತ್ತದೆ. ಪಡಿತರ ಕಾರ್ಡ್‌ದಾರರಲ್ಲಿ ಶೇ. 90ರಷ್ಟು ಕುಟುಂಬಗಳ ಮುಖ್ಯಸ್ಥರು ಮಹಿಳೆಯರಾಗಿದ್ದಾರೆ. ಇವರಲ್ಲಿ ಅನೇಕರು ಬ್ಯಾಂಕ್ ಖಾತೆ ಹೊಂದಿಲ್ಲ. ಆಧಾರ್ ಸಂಖ್ಯೆಯೂ ಜೋಡಣೆ ಆಗಿಲ್ಲ. ಈ ಹಿನ್ನೆಲೆಯಲ್ಲಿ ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಗೆ ಇದು ಸವಾಲಾಗಿದೆ.
ಇದನ್ನೂ ಓದಿ : ಕೇಂದ್ರ ಅಕ್ಕಿ ಕೊಡದ್ದಕ್ಕೆ ವಿಧಿ ಇಲ್ಲದೇ ಹಣ ಕೊಡ್ತಿದ್ದೇವೆ : ಬಿಜೆಪಿಗೆ ಸಚಿವ ವೆಂಕಟೇಶ್ ಟಾಂಗ್