ಹಾವೇರಿ: ಜಿಲ್ಲಾಸ್ಪತ್ರೆಯಲ್ಲಿ ಹೊರಗುತ್ತಿಗೆ ನೌಕರರ ಮರುನೇಮಕಕ್ಕೆ ಆಗ್ರಹಿಸಿ ಡಿ ದರ್ಜೆಯ ಹೊರಗುತ್ತಿಗೆ ನೌಕರರು ಶುಕ್ರವಾರ ಅಹೋರಾತ್ರಿ ಪ್ರತಿಭಟನೆ ನಡೆಸಿದರು. ಜಿಲ್ಲಾಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 30 ಹೊರಗುತ್ತಿಗೆ ನೌಕರರನ್ನು ಏಕಾಏಕಿ ಕೆಲಸದಿಂದ ತೆಗೆದುಹಾಕಲಾಗಿದೆ. ಕಳೆದ ಏಳು ವರ್ಷಗಳಿಂದ ಜಿಲ್ಲಾಸ್ಪತ್ರೆಯಲ್ಲಿ ಡಿ ದರ್ಜಿ ನೌಕರರಾಗಿ ಕೆಲಸ ನಿರ್ವಹಿಸುತ್ತಿದ್ದ ಅವರನ್ನು ಇದೀಗ ಹಣಕಾಸಿನ ಕಾರಣ ನೀಡಿ ಕೆಲಸದಿಂದ ಕೈಬಿಡಲಾಗಿದೆ ಎಂದು ನೌಕರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿರಿಯ ಅಧಿಕಾರಿಗಳ ಕ್ರಮ ಖಂಡಿಸಿ ಹೊರಗುತ್ತಿಗೆ ನೌಕರರು ಇದೀಗ ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ. ಜಿಲ್ಲಾಸ್ಪತ್ರೆಯ ಆವರಣದಲ್ಲಿ ಹೊರಗುತ್ತಿಗೆ ನೌಕರರು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ನಾವು ಕೋವಿಡ್ ಸೇರಿದಂತೆ ಅಪಾಯಕಾರಕ ದಿನಗಳಲ್ಲಿ ಸಹ ಕೆಲಸ ಮಾಡಿದ್ದೇವೆ. ಕೆಲವೊಮ್ಮೆ ಜೀವದ ಹಂಗು ತೊರೆದು ಕಾರ್ಯನಿರ್ವಹಸಿದ್ದೇವೆ. ಆದರೆ, ಇದ್ದಕ್ಕಿದ್ದಂತೆ ನಮ್ಮನ್ನ ಕೆಲಸದಿಂದ ತೆಗೆದು ಹಾಕಿರುವುದು ತೀವ್ರ ಬೇಸರ ತರಿಸಿದೆ ಎಂದು ಹೊರಗುತ್ತಿಗೆ ನೌಕರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾವೇರಿಯಲ್ಲಿ ನೂತನ ಮೆಡಿಕಲ್ ಕಾಲೇಜ್ ಆರಂಭವಾಗುತ್ತಿದೆ. ಇಲ್ಲಿ ಅವಕಾಶ ಸಿಗದಿದ್ದರೇ ಅಲ್ಲಿಯಾದರೂ ಅವಕಾಶ ಸಿಗುತ್ತೆ ಎಂದುಕೊಂಡಿದ್ದೇವು. ಆದರೆ, ಈಗ ಇಲ್ಲಿ ಕೆಲಸದಿಂದ ತೆಗೆದು ಹಾಕಿದ್ದಾರೆ. ಅಲ್ಲಿ ಸಹ ಕೆಲಸ ಭರ್ತಿ ಮಾಡಿಕೊಳ್ಳಲು ಬೇರೆ ಪ್ರಕ್ರಿಯೆಯಿದೆ ಎನ್ನುತ್ತಿದ್ದಾರೆ. ಹೀಗಾದರೆ ಹೇಗೆ ಎಂದು ನೌಕರರು ಪ್ರಶ್ನಿಸಿದರು.
ಕಳೆದ ಏಳು ವರ್ಷಗಳಿಂದ ಜಿಲ್ಲಾಡಳತದಿಂದ ನಮ್ಮ ವೇತನ ಪಾವತಿಯಾಗುತ್ತಿತ್ತು. ಆದರೆ, ಈಗ ನಮಗೆ ನೀಡಲು ಬಜೆಟ್ ಇಲ್ಲಾ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಇದೀಗ ನಮ್ಮನ್ನ ಕೆಲಸದಿಂದ ತೆಗೆದಿರುವ ಪರಿಣಾಮ ನಮ್ಮ ಕುಟುಂಬಗಳು ಎಲ್ಲಿ ಹೋಗಬೇಕು ಎಂದು ಪ್ರತಿಭಟನಾಕಾರರು ಅಳಲುತೋಡಿಕೊಂಡರು.
ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ಡಾ.ಪರಮೇಶ ಹಾವನೂರು ಅವರು, ''ಜಿಲ್ಲಾಸ್ಪತ್ರೆಯಲ್ಲಿ ಡಿ ದರ್ಜಿ ಹೊರಗುತ್ತಿಗೆ ನೌಕರರನ್ನು ಈ ಹಿಂದೆ ಇದ್ದ ಅಧಿಕಾರಿಗಳು ತೆಗೆದುಕೊಂಡಿದ್ದಾರೆ. ಈ ಸಿಬ್ಬಂದಿ ಇಲ್ಲಿಯವರೆಗೆ ಕೆಲಸ ಮಾಡಿದ್ದಾರೆ. ಅವರಿಗೆ ವೇತನ ನೀಡಲು ಹಣಕಾಸಿನ ತೊಂದರೆ ಆಗುತ್ತಿದೆ. ಹೀಗಾಗಿ ಅವರನ್ನು ಕೆಲಸದಿಂದ ಕೈಬಿಡಲಾಗಿದೆ'' ಎಂದು ತಿಳಿಸಿದರು.
''ಕೆಲಸ ಕಳೆದುಕೊಂಡವರಿಗೆ ಟ್ರಾಮಾ ಕೇರ್ ಸೆಂಟರ್ ಎಂಸಿಹೆಚ್ ಮತ್ತು ನೂತನ ಮೆಡಿಕಲ್ ಕಾಲೇಜ್ ಡಿ ದರ್ಜಿ ನೌಕರರ ನೇಮಕಾತಿಯಲ್ಲಿ ಮೊದಲ ಪ್ರಾಶಸ್ತ್ಯ ನೀಡುವ ಕುರಿತಂತೆ ಚರ್ಚಿಸಲಾಗಿದೆ. ಆದಷ್ಟು ಬೇಗ ಈ ನೌಕರರಿಗೆ ನ್ಯಾಯ ಒದಗಿಸಿಕೊಡಲಾಗುವುದು. ಈ ವರ್ಷ ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲೆ ಪ್ರಮಾಣದ ರೋಗಿಗಳ ಚಿಕಿತ್ಸೆಗೆ ಬಂದಿದ್ದಾರೆ. ಆಸ್ಪತ್ರೆಯ ಉತ್ತಮ ಸೇವೆ ನೀಡಲು ಈ ನೌಕರರ ಶ್ರಮ ಅಧಿಕವಾಗಿದೆ. ಆದರೂ ಸಹ ನಾವು ಅಸಹಾಯಕರಾಗಿದ್ದು, ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಆದಷ್ಟು ಬೇಗ ಈ ನೌಕರರ ನೇಮಕಾತಿ ಬಗ್ಗೆ ಒಂದು ತೀರ್ಮಾನಕ್ಕೆ ಬರುತ್ತೇವೆ'' ಎಂದು ಭರವಸೆ ನೀಡಿದರು.
ಇದನ್ನೂ ಓದಿ: ಹುತಾತ್ಮ ಕ್ಯಾಪ್ಟನ್ ಪ್ರಾಂಜಲ್ ಕುಟುಂಬಕ್ಕೆ 50 ಲಕ್ಷ ರೂ ಪರಿಹಾರ ಘೋಷಿಸಿದ ಸಿಎಂ