ಹಾವೇರಿ: ಜಿಲ್ಲಾಕೇಂದ್ರ ಹಾವೇರಿ ನಗರದ ಪಕ್ಕದಲ್ಲಿಯೇ ರಾಷ್ಟ್ರೀಯ ಹೆದ್ದಾರಿ 48 ಹಾಯ್ದು ಹೋಗಿದೆ. ರಾಷ್ಟ್ರೀಯ ಹೆದ್ದಾರಿ 48 ರಿಂದ ನಗರ ಸಂಪರ್ಕಿಸಲು ನಾಲ್ಕು ಕಡೆ ಬೈ ಪಾಸ್ ರಸ್ತೆಗಳನ್ನು ಕೂಡ ನಿರ್ಮಿಸಲಾಗಿದೆ. ಅವುಗಳಲ್ಲಿ ತೋಟದಯಲ್ಲಾಪುರ ಮತ್ತು ಪ್ರಾದೇಶಿಕ ಸಾರಿಗೆ ಕಚೇರಿ ರಸ್ತೆಗಳು ಪ್ರಮುಖವಾದದು.
ಬೆಂಗಳೂರು ಕಡೆಯಿಂದ ಬರುವ ವಾಹನಗಳು ತೋಟದಯಲ್ಲಾಪುರ ಬೈಪಾಸ್ ಮೂಲಕ ಹಾವೇರಿ ಸಂಪರ್ಕಿಸುತ್ತವೆ. ಇನ್ನು ಹುಬ್ಬಳ್ಳಿ ಕಡೆಯಿಂದ ಬರುವ ವಾಹನಗಳು ಆರ್‌ಟಿಒ ಕಚೇರಿಯ ಬೈಪಾಸ್ ಮೂಲಕ ನಗರ ಸಂಪರ್ಕಿಸುತ್ತವೆ. ಆದರೆ, ಈ ಸಂಪರ್ಕ ಕಲ್ಪಿಸುವ ರಸ್ತೆಗಳು ಸಂಪೂರ್ಣ ಹಾಳಾಗಿದ್ದರಿಂದ ಇಲ್ಲಿ ಸಾಕಷ್ಟು ಅನಾಹುತಗಳು ಸಂಭವಿಸಿದ್ದವು. ದ್ವಿಚಕ್ರವಾಹನ ಸವಾರರು ಸ್ಕಿಡ್ ಆಗಿ ಬಿದ್ದು ಕೈಕಾಲು ಮುರಿದುಕೊಂಡಿದ್ದರು.
ಜನವರಿ ತಿಂಗಳಲ್ಲಿ ಹಾವೇರಿಯಲ್ಲಿ ನಡೆದ ಅಖಿಲ ಭಾರತ 86ನೇ ಸಾಹಿತ್ಯ ಸಮ್ಮೇಳನದ ವೇಳೆ ಈ ರಸ್ತೆಗಳನ್ನು ದುರಸ್ತಿ ಮಾಡಲಾಗಿತ್ತು. ಇದರಿಂದ ಮತ್ತೆ ಈ ರಸ್ತೆಗಳಿಗೆ ಡಾಂಬರ್ ಹಾಕಲಾಗಿತ್ತು. ಆದರೆ, ಏಳೇ ತಿಂಗಳಾಗುವಷ್ಟರಲ್ಲಿ ರಸ್ತೆಗಳು ವಾಪಾಸ್ ಹಾಳಾಗಿವೆ.
ಸರ್ವಿಸ್ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ತಗ್ಗುಗುಂಡಿಗಳು ಬಿದ್ದಿದ್ದು ಮಳೆಗಾಲದಲ್ಲಿ ಈ ರಸ್ತೆಗಳಲ್ಲಿ ಸಂಚರಿಸುವುದು ದುಸ್ತರವಾಗಿದೆ. ದ್ವಿಚಕ್ರವಾಹನ ಸವಾರರು ಗುಂಡಿಗಳನ್ನು ತಪ್ಪಿಸಿ ಬೈಕ್ ಓಡಿಸಲು ಸರ್ಕಸ್ ಮಾಡಬೇಕಾಗುತ್ತದೆ. ಇನ್ನು ದೊಡ್ಡ ದೊಡ್ಡ ವಾಹನಗಳ ಪರಿಸ್ಥಿತಿ ಹೇಳತಿರದು. ಅಧಿಕ ಭಾರದ ವಾಹನಗಳು ಹರಸಾಹಸವನ್ನೇ ಮಾಡಬೇಕಿದೆ.
ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ರಸ್ತೆ ನಿರ್ಮಾಣಕ್ಕೆ ಹಾಕಿದ ಜಲ್ಲಿ ಕಲ್ಲುಗಳು ಎದ್ದಿದ್ದು ರಸ್ತೆ ತುಂಬಾ ಹರಡಿದೆ. ಇದರಿಂದ ವಾಹನಗಳು ಸಂಚರಿಸುವಾಗ ಈ ಕಲ್ಲುಗಳು ಚಕ್ರಕ್ಕೆ ಸಿಲುಕಿ ಅಕ್ಕ ಪಕ್ಕದವರ ಮೇಲೆ ಬೀಳುವ ಸಾಧ್ಯತೆ ಇದೆ. ರಸ್ತೆಗಳಲ್ಲಿ ವಾಹನಗಳು ಸಂಚರಿಸುತ್ತಿದ್ದಂತೆ ಏಳುವ ಧೂಳು ವಾಹನ ಸವಾರರಿಗೆ ರಸ್ತೆ ಕಾಣದಂತೆ ಮಾಡುತ್ತದೆ.
ಈ ಕುರಿತಂತೆ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಸಾಕಷ್ಟು ಮನವಿ ಮಾಡಿದ್ದೇವೆ. ಆದರೂ ಸಹ ಈ ರಸ್ತೆಗಳ ದುರಸ್ತಿಗೆ ಮುಂದಾಗಿಲ್ಲಾ ಎಂದು ಆರೋಪಿಸುತ್ತಾರೆ ವಾಹನ ಸವಾರರು. ಪ್ರತಿ ನಿತ್ಯ ಇಲ್ಲಿ ಓಡಾಡುವುದು ಅನಿವಾರ್ಯವಾಗಿದೆ. ಬೇರೆ ಮಾರ್ಗವಿಲ್ಲದೇ ಇಲ್ಲಿಯೇ ಸಂಚರಿಸಬೇಕು. ಆದರೆ ರಸ್ತೆ ನೋಡಿದರೆ ಈ ರೀತಿ ಇದೆ. ಸಮ್ಮೇಳನದ ವೇಳೆ ನಿರ್ಮಿಸಿದ ರಸ್ತೆ ಈಗ ಹದಗೆಟ್ಟಿದ್ದು, ಇದರಿಂದ ಕೆಲ ಬಸ್‌ಗಳು ಹಾವೇರಿ ನಗರಕ್ಕೆ ಬರದೇ ಬೈಪಾಸ್‌ನಲ್ಲಿ ಪ್ರಯಾಣಿಕರನ್ನು ಇಳಿಸಿ ಹೋದ ಉದಾಹರಣೆಗಳಿವೆ.
ಇಲ್ಲಿ ಸಂಚರಿಸುವ ವಾಹನಗಳು ಪದೇ ಪದೇ ರಿಪೇರಿಗೆ ಬರುತ್ತವೆ ಎನ್ನುತ್ತಾರೆ ಬೈಕ್ ಸವಾರರು. ಆದಷ್ಟು ಬೇಗ ಈ ಬೈಪಾಸ್ ರಸ್ತೆಗಳನ್ನು ದುರಸ್ತಿಪಡಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನು ಸ್ಥಳೀಯರು ನೀಡಿದ್ದಾರೆ. ರಸ್ತೆಯ ಅಕ್ಕಪಕ್ಕದಲ್ಲಿರುವ ಜಮೀನಿನಲ್ಲಿ ಬೆಳೆದ ಬೆಳೆಗಳು ಸಹ ಧೂಳಿನಿಂದ ಹಾಳಾಗಲಾರಂಭಿಸಿವೆ.
ಇದನ್ನೂ ಓದಿ: ಬೆಳಗಾವಿ: ಸಿಎಂ ಆಗಮನ ಹಿನ್ನೆಲೆಯಲ್ಲಿ ಅಧಿಕಾರಿಗಳಿಂದ ರಸ್ತೆ ದುರಸ್ತಿ- ಜನಸಾಮಾನ್ಯರ ಆಕ್ರೋಶ