ರಾಣೆಬೆನ್ನೂರು (ಹಾವೇರಿ): ಕೊರೊನಾ ವೈರಸ್ ತಡೆಗಟ್ಟುವ ಸಲುವಾಗಿ ದಿನನಿತ್ಯ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರ ಸೇವೆ ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಕೃಷ್ಣಾ ಭಾಜಪೇಯಿ ಹೇಳಿದರು.
ರಾಣೆಬೆನ್ನೂರು ತಾಲೂಕಿನ ಆರೇಮಲ್ಲಾಪುರ ಗ್ರಾಮದ ಶ್ರೀ ಶರಣಬಸವೇಶ್ವರ ಮಠದ ಪೀಠಾಧಿಪತಿಯಾದ ಡಾ. ಪ್ರಣಾವಾನಂದ ಸ್ವಾಮೀಜಿಯವರು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ, ತಾಲೂಕಿನ ವರದಿಗಾರರಿಗೆ ಮತ್ತು ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಿ ಅವರು ಮಾತನಾಡಿದರು.
ದೇಶದಲ್ಲಿ ಕೊರೊನಾ ಹಿನ್ನೆಲೆ ಪೊಲೀಸರು, ವೈದ್ಯರು, ಆಶಾ ಕಾರ್ಯಕರ್ತೆಯರು, ಕಾರ್ಮಿಕರು ಸೇರಿದಂತೆ ವಿವಿಧ ಇಲಾಖೆಯ ಸಿಬ್ಬಂದಿ ಕೊರೊನಾ ವಾರಿಯರ್ಸ್ಆಗಿ ಕೆಲಸ ಮಾಡಿದ್ದಾರೆ. ಇದೇ ರೀತಿಯಲ್ಲಿ ಪತ್ರಿಕೆ ಮತ್ತು ವಿದ್ಯುನ್ಮಾನ ವರದಿಗಾರರು ಪ್ರತಿನಿತ್ಯ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದು, ಅವರನ್ನು ನಾವು ಕೊರೊನಾ ವಾರಿಯರ್ಸ್ ಎಂದು ಗುರುತಿಸಿ ಮಠದ ಸ್ವಾಮೀಜಿ ಸನ್ಮಾನ ಮಾಡುತ್ತಿರುವುದು ಸಂತಸದ ವಿಷಯ ಎಂದರು.
ಈ ಕೊರೊನಾ ಮಟ್ಟಹಾಕಲು ನಮ್ಮ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಸ್ಕ್ರೀನಿಂಗ್ ಮಾಡುತ್ತಿದ್ದಾರೆ. ಅವರಿಗೆ ನಮ್ಮ ದೊಡ್ಡ ನಮನ ಸಲ್ಲಿಸಬೇಕು. ಸದ್ಯ ಸರ್ಕಾರದಿಂದ ಕೊರೊನಾ ಸಂಬಂಧ ಎಲ್ಲಾ ಯೋಜನೆಗಳನ್ನು ನೀಡಲಾಗುತ್ತದೆ. ಅವುಗಳನ್ನು ಸಾರ್ವಜನಿಕರು ಬಳಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸಮಯದಲ್ಲಿ ಪ್ರಣವಾನಂದ ಸ್ವಾಮೀಜಿಯವರು ಕೊರೊನಾ ವೈರಸ್ ಬಗ್ಗೆ ಜಾಗೃತಿ ಮತ್ತು ಸನ್ಮಾನ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದ್ದಾರೆ. ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತದ ನೌಕರರಿಗೆ 20 ಸಾವಿರ ಮಾಸ್ಕ್ ವಿತರಣೆ ಮಾಡಿದ್ದಾರೆ.
ಕಾರ್ಯಕ್ರಮದಲ್ಲಿ ಎಸಿ ದೀಲಿಪ್ ಶಸಿ, ಡಿಎಸ್ಪಿ ಟಿ.ವಿ.ಸುರೇಶ, ಮುಖಂಡರಾದ ಶಿವು ಸಣ್ಣಬೊಮ್ಮಾಜಿ, ಗಣೇಶ ಸಿದ್ದಾಳಿ, ನಿಂಗಪ್ಪ, ಸೇರಿದಂತೆ ಪತ್ರಕರ್ತರು, ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.