ಹಾವೇರಿ: ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ರಾಣೆಬೆನ್ನೂರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ನಗರದ ಗಂಗಾಪುರದಲ್ಲಿ ವಶಪಡಿಸಿಕೊಂಡಿದ್ದಾರೆ.
ರಾಣೆಬೆನ್ನೂರು ಆಹಾರ ನಿರೀಕ್ಷಕ ಶಿವಕುಮಾರ್ ವನಳ್ಳಿ ಮತ್ತು ರಾಣೆಬೆನ್ನೂರು ಗ್ರಾಮಾಂತರ ಪೊಲೀಸರು ಕಾರ್ಯಾಚರಣೆ ನಡೆಸಿ ಸುಮಾರು 3 ಲಕ್ಷ 66ಸಾವಿರ ರೂಪಾಯಿ ಮೌಲ್ಯದ 166 ಕ್ವಿಂಟಲ್ ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ. ಲಾರಿ ಚಾಲಕ ದೀಪಕ ಹರವಿಶೆಟ್ಟರ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಡಿತರ ಅಕ್ಕಿಯ ಅಕ್ರಮ ಸಾಗಾಟಕ್ಕೆ ಸಂಬಂಧಿಸಿದಂತೆ ಕಳೆದ ಜೂನ್ 08 ರಂದು ಹಾನಗಲ್ನಿಂದ ಕಳ್ಳಸಾಗಾಣಿಕೆ ಮಾಡುತ್ತಿದ್ದ 415 ಅಕ್ಕಿ ಚೀಲಗಳನ್ನು ಆಹಾರ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಅಲ್ಲದೆ ಶಿಗ್ಗಾವಿ ತಾಲೂಕಿನ ಹೋತನಹಳ್ಳಿ ಗ್ರಾಮದಿಂದ ಮಂಡ್ಯಜಿಲ್ಲೆಯ ಲಕ್ಷ್ಮಿದೇವಿ ರೈಸ್ ಇಂಡಸ್ಟ್ಕೀಜ್‌ಗೆ ಸಾಗಿಸುತ್ತಿದ್ದ ಸುಮಾರು ನಾಲ್ಕು ಲಕ್ಷ 10 ಸಾವಿರ ರೂಪಾಯಿ ಮೌಲ್ಯದ ಅಕ್ಕಿಯನ್ನು ಅಧಿಕಾರಿಗಳು ಜಪ್ತಿ ಮಾಡಿದ್ದರು. ಜೊತೆಗೆ, ಅಕ್ರಮ ಸಾಗಾಣಿಕೆಗೆ ಬಳಸಿದ್ದ ಲಾರಿ ಸಹಿತ ಮೂವರು ಆರೋಪಿಗಳನ್ನು ಬಂಧಿಸಿದ್ದರು.
ಇದನ್ನೂ ಓದಿ: ಕಿಡಿಗೇಡಿ ಪ್ರೇಮಿಯಿಂದ ಆ್ಯಸಿಡ್ ದಾಳಿಗೆ ತುತ್ತಾದ ಯುವತಿಗೆ ಪೊಲೀಸರಿಂದ ರಕ್ತದಾನ