ಹಾವೇರಿ: ಉರಗ ತಜ್ಞರೊಬ್ಬರು ರಕ್ಷಿಸಿದ್ದ ನಾಗನಿಗೆ ಇಲ್ಲಿನ ಪುರಸಿದ್ದೇಶ್ವರ ದೇವಸ್ಥಾನದಲ್ಲಿ ಹಾಲೆರೆದು ಪೂಜೆ ಸಲ್ಲಿಸುವ ಮೂಲಕ ಭಕ್ತರು ವಿಶೇಷವಾಗಿ ನಾಗರ ಪಂಚಮಿ ಆಚರಿಸಿದರು. ಉರಗಪ್ರೇಮಿ ರಮೇಶ್ ಎಂಬುವವರು ಕೆಲ ದಿನಗಳ ಹಿಂದೆ ನಾಗರಹಾವೊಂದನ್ನು ಕಾಡಿಗೆ ಬಿಡಲು ಹೊರಟಾಗ ಅದನ್ನು ಕಂಡಿರುವ ಸ್ಥಳೀಯರು ಪಂಚಮಿ ದಿನ ಹಾವಿಗೆ ಪೂಜೆ ಮಾಡುವುದಾಗಿ ಮನವಿ ಮಾಡಿದ್ದಾರೆ. ಬಳಿಕ ರಮೇಶ್ ಈ ಹಾವನ್ನು ಪುರಸಿದ್ದೇಶ್ವರ ದೇವಸ್ಥಾನದೊಳಗಡೆ ಬಿಟ್ಟಿದ್ದರು.
ಗರ್ಭಗುಡಿ ಪ್ರವೇಶಿಸಿದ ಹಾವು ಶಿವಲಿಂಗದ ಮೇಲಿರುವ ಕಳಸದಲ್ಲಿ ಕುಳಿತು ಭಕ್ತರಿಗೆ ದರ್ಶನ ನೀಡಿದೆ. ಸುದ್ದಿ ತಿಳಿಯುತ್ತಿದ್ದಂತೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇಗುಲಕ್ಕೆ ಆಗಮಿಸಿ ಪೂಜೆ ಸಲ್ಲಿಸಿದ್ದಾರೆ. ಈ ಕುರಿತು ಭಕ್ತರೊಬ್ಬರು ಮಾತನಾಡಿ, "ಪುರಸಿದ್ದೇಶ್ವರ ದೇವಸ್ಥಾನವನ್ನು ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ನಿರ್ಮಿಸಲಾಗಿದೆ. ನಾಗಪಂಚಮಿ ದಿನವಾದ ಇಂದು ಜೀವಂತ ನಾಗಪ್ಪ ಕಾಣಿಸಿಕೊಂಡಿರುವುದು ತಮ್ಮ ಸೌಭಾಗ್ಯ" ಎಂದು ಹರ್ಷ ವ್ಯಕ್ತಪಡಿಸಿದರು.
ಇದನ್ನೂ ಓದಿ: ಸಂಸದರ ಅಮಾನತು ಹಿಂತೆಗೆತ: ಲೋಕಸಭೆಯಲ್ಲಿ ಹಣದುಬ್ಬರ ಮೇಲಿನ ಚರ್ಚೆ