ಹಾವೇರಿ: ಭೂಸ್ವಾಧೀನ ವಿರೋಧಿಸಿ ರೈತರು ನಡೆಸುತ್ತಿದ್ದ ಸತ್ಯಾಗ್ರಹ ಸ್ಥಳಕ್ಕೆ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಭೇಟಿ ನೀಡಿ ರೈತರೊಂದಿಗೆ ಮಾತುಕತೆ ನಡೆಸಿದರು. ಜಿಲ್ಲೆಯ ರಟ್ಟೀಹಳ್ಳಿ ಪಟ್ಟಣದ ಭಗತ್ ಸಿಂಗ್ ವೃತ್ತದಲ್ಲಿ ಸತ್ಯಾಗ್ರಹಕ್ಕೆ ಧಾರವಾಡ ಹೈಕೋರ್ಟ್ ನ ಹಿರಿಯ ವಕೀಲ ಬಿ.ಡಿ.ಹಿರೇಮಠ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದೆ.
ಉಡಗಣಿ-ತಾಳಗುಂದ-ಹೊಸೂರು ನೀರಾವರಿ ಯೋಜನೆಗೆ ಭೂಸ್ವಾಧೀನ ಮಾಡಲು ಮುಂದಾಗಿರು ಸರ್ಕಾರದ ವಿರುದ್ಧ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ನೀರಾವರಿ ಯೋಜನೆ, ಹಾವೇರಿ ಜಿಲ್ಲೆ ಹಿರೇಕೆರೂರು ಮತ್ತು ರಟ್ಟೀಹಳ್ಳಿ ತಾಲೂಕಿನ 1067 ರೈತರ ಜಮೀನು ಸ್ವಾಧೀನ ಮಾಡಿಕೊಳ್ಳಲು ಮುಂದಾಗಿದೆ. ನಿನ್ನೆ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಸಂಸದ ಬಿವೈ ರಾಘವೇಂದ್ರ ಹೋರಾಟಗಾರರ ಮನವೊಲಿಸುವ ಪ್ರಯತ್ನ ಮಾಡಿದರು. ಆದರೆ ಅನ್ನದಾತರು ಮಾತ್ರ ಯಾವುದೇ ಕಾರಣಕ್ಕೂ ಭೂಸ್ವಾಧೀನ ಮಾಡಬಾರದು ಎಂದು ಪಟ್ಟು ಹಿಡಿದು ಸತ್ಯಾಗ್ರಹ ಮುಂದುವರಿಸಿದ್ದಾರೆ.