ಹಾವೇರಿ : ಜಿಲ್ಲೆಯ ಬ್ಯಾಡಗಿ ತಾಲೂಕಿನ ಬಡಮಲ್ಲಿ ಗ್ರಾಮದ ನೂರಕ್ಕೂ ಅಧಿಕ ರೈತರು ತಮ್ಮದಲ್ಲದ ತಪ್ಪಿಗೆ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ರೈತರ 550ಕ್ಕೂ ಅಧಿಕ ಎಕರೆ ಜಮೀನನ್ನ 2016ರಲ್ಲಿ ಗ್ರಾಮದ ಸಮೀಪದ ಭಗತ್‌ಸಿಂಗ್ ಕಂದಾಯ ಗ್ರಾಮದಲ್ಲಿ ಸೇರಿಸಲಾಗಿದೆ.
ಆದರೆ, ಕಂದಾಯ ಗ್ರಾಮಕ್ಕೆ ಸೇರಿಸಿದ್ದನ್ನು ಬಿಟ್ಟರೆ, ಇವರ ಜಮೀನು ಕಂದಾಯ ಇಲಾಖೆಯ ಭೂಮಿ ಕೇಂದ್ರ ಮತ್ತು ಅಟಿಲ್ ಜೀ ಮೋಜಣಿ ತಂತ್ರಾಂಶದಲ್ಲಿ ಸೇರ್ಪಡೆಯಾಗಿಲ್ಲ. ಈ ರೈತರ ಹೆಸರುಗಳು ಬಡಮಲ್ಲಿ ಗ್ರಾಮದಲ್ಲಿವೆ. ಆದರೆ, ಈಗ ಇವರ ಜಮೀನುಗಳನ್ನು ಭಗತ್ ಸಿಂಗ್ ನಗರಕ್ಕೆ ಸೇರಿಸಲಾಗಿದೆ. ಪರಿಣಾಮ ಈ ರೈತರಿಗೆ ಸರ್ಕಾರದಿಂದ ಯಾವುದೇ ಸಾಲ ಸೌಲಭ್ಯಗಳು ಸಿಗುತ್ತಿಲ್ಲ.
ಸರ್ಕಾರದ ಬೆಳೆಹಾನಿ,ವಿಮೆ, ಸಾಲ ಮನ್ನಾ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಸೌಲಭ್ಯಗಳು ಸೇರಿ ಸರ್ಕಾರದ ಯೋಜನೆಗಳಿಂದ ಇವರಿಗೆ ಲಭಿಸುತ್ತಿಲ್ಲ. ಬ್ಯಾಂಕ್‌ನಲ್ಲಿ ಕೂಡ ಸಾಲ ಸಿಗುತ್ತಿಲ್ಲ. ಅಷ್ಟೇ ಅಲ್ಲ, ಬ್ಯಾಂಕ್‌ನಲ್ಲಿ 2016ರ ಹಿಂದೆ ಮಾಡಿದ ಸಾಲ ಕಟ್ಟಲು ಹಣವಿದ್ದರೂ ತಂತ್ರಾಂಶದ ಕಾರಣದಿಂದ ಹಣ ಕಟ್ಟಲಾಗುತ್ತಿಲ್ಲ ಎಂದು ರೈತರು ಆರೋಪಿಸಿದ್ದಾರೆ.
ಒಂದೆಡೆ ಬಡಮಲ್ಲಿಯಲ್ಲಿ ನೂರಕ್ಕೂ ಅಧಿಕ ರೈತರ ಹೆಸರು ಇಲ್ಲ. ಇನ್ನೊಂದು ಕಡೆ 2016ರಲ್ಲಿ ನಿರ್ಮಾಣವಾಗಿರುವ ಭಗತ್ ಸಿಂಗ್ ಕಂದಾಯ ಗ್ರಾಮದ ತಂತ್ರಾಂಶದಲ್ಲಿ ಕೂಡ ಇವರ ಹೆಸರು ತೋರಿಸುತ್ತಿಲ್ಲ. ಪರಿಣಾಮ ಕುಟುಂಬದಲ್ಲಿ ಹಿರಿಯರು ತೀರಿದರೆ ಅವರ ಹೆಸರಿನಲ್ಲಿದ್ದ ಆಸ್ತಿಯನ್ನ ತಮ್ಮ ಹೆಸರಿನಲ್ಲಿ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಕುರಿತಂತೆ ಹಲವು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ನಮ್ಮ ಹೆಸರು, ಮನೆಗಳು ಬಡಮಲ್ಲಿ ಗ್ರಾಮದಲ್ಲಿವೆ. ಹಾಗಾಗಿ, ನಮ್ಮನ್ನ 2016ರ ಹಿಂದೆ ಇರುವಂತೆ ಬಡಮಲ್ಲಿ ಗ್ರಾಮಕ್ಕೆ ಸೇರಿಸಿ. ಭಗತ್ ಸಿಂಗ್ ಕಂದಾಯ ಗ್ರಾಮಕ್ಕಾಗಿ ನಮ್ಮ ಜಮೀನುಗಳನ್ನು ಅಲ್ಲಿಗೆ ಸೇರಿಸಲಾಗಿದೆ. ಇದರಿಂದಾಗಿ ಕಷ್ಟ ಅನುಭವಿಸುತ್ತಿದ್ದೇವೆ. ಆದಷ್ಟು ಬೇಗ ತಂತ್ರಾಂಶದಲ್ಲಿ ನಮ್ಮ ಹೆಸರು ಸೇರಿಸಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.