ಹಾವೇರಿ : ಕಾಂಗ್ರೆಸ್ ನಾಯಕರು ಸುಳ್ಳಿನ ಫ್ಯಾಕ್ಟರಿಗಳಿದ್ದಂತೆ. ಚುನಾವಣೆ ಬಂದಾಗಲೆಲ್ಲ ಸುಳ್ಳುಗಳನ್ನು ಹುಟ್ಟು ಹಾಕುತ್ತಾರೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಆರೋಪಿಸಿದರು.
ಜಿಲ್ಲೆಯ ಹಾನಗಲ್ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ್ ಪರ ಮತಯಾಚಿಸಿ ಮಾತನಾಡಿದ ಅವರು, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರು ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ್ ಸಂಗೂರು ಕಾರ್ಖಾನೆ ಹಾಳು ಮಾಡಿದ್ದಾರೆ ಎಂಬ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ. ಆ ರೀತಿ ಏನಾದರೂ ಆಗಿದ್ದರೆ ಇಲ್ಲಿನ ಜನರ ಉದಾಸಿಯನ್ನು ಆರು ಬಾರಿ ಶಾಸಕರಾಗಿ ಆಯ್ಕೆ ಮಾಡುತ್ತಿರಲಿಲ್ಲ ಎಂದರು.
ಸೋಲುತ್ತೇವೆ ಎಂಬ ಹತಾಷ ಭಾವನೆಯಿಂದ ಮಾಜಿ ಸಿಎಂ ಸಿದ್ದರಾಮಯ್ಯನವರು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರಿಗೆ ಚುನಾವಣೆ ಬರುತ್ತಿದ್ದಂತೆ ಹಿಂದುಳಿದವರು ನೆನಪಾಗುತ್ತಾರೆ. ಮುಖ್ಯಮಂತ್ರಿಯಾಗಿದ್ದಾಗ ನೆನಪಾಗಲಿಲ್ಲ ಎಂದು ಆರೋಪಿಸಿದರು.
ನಮ್ಮ ಅಭ್ಯರ್ಥಿಯ ಪರವಾಗಿ ಸಿಎಂ ಸೇರಿದಂತೆ ಅನೇಕ ಸಚಿವರು ಪ್ರಚಾರ ಮಾಡುತ್ತಾರೆ. ಈ ಬಾರಿಯ ಉಪಚುನಾವಣೆಯಲ್ಲಿ ಹಾನಗಲ್ ಹಾಗೂ ಸಿಂದಗಿ ಜನತೆ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರನ್ನು ಆರಿಸಿ ತರುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಸಿಎಂ ಇಬ್ರಾಹಿಂ ಸಿದ್ದರಾಮಯ್ಯನವರ ಇನ್ನೊಂದು ಮುಖ. ಸಿದ್ದರಾಮಯ್ಯನವರ ಭಾಷಣದ ವೇಳೆ ಮನರಂಜನೆಗಾಗಿ ಸಿಎಂ ಇಬ್ರಾಹಿಂರನ್ನು ಬಳಸಿಕೊಳ್ಳಲಾಗುತ್ತಿತ್ತು. ಅವರು ನೀಡುವಂತಹ ಹೇಳಿಕೆಗಳು ಕಾಂಗ್ರೆಸ್ ಪಕ್ಷದ್ದೆ ಹೊರತು ಬಿಜೆಪಿದಲ್ಲ. ಅವರ ಅಭಿಪ್ರಾಯಗಳು ಸತ್ಯಕ್ಕೆ ಹತ್ತಿರವಾಗಿದೆ ಎಂದರು. ಯಡಿಯೂರಪ್ಪ ಬಿಜೆಪಿಯನ್ನು ಕಟ್ಟಿ ಬೆಳೆಸಿದವರು, ಅವರು ಹಾನಗಲ್ ಮತ್ತು ಸಿಂದಗಿ ಉಪಚುನಾವಣೆ ಪ್ರಚಾರಕ್ಕೆ ಬರುತ್ತಾರೆ ಎಂದು ಸಚಿವರು ತಿಳಿಸಿದರು.
ಇದನ್ನೂ ಓದಿ: COVID REPORT: 264 ಜನರಿಗೆ ಕೋವಿಡ್ ಸೋಂಕು- 6 ಮಂದಿ ಸಾವು