ಹಾವೇರಿ: ಮಧ್ಯಪ್ರದೇಶ ಸೇರಿದಂತೆ ಉತ್ತರಭಾರತದ ರಾಜ್ಯಗಳಲ್ಲಿ ಹಿಂದಿ ಮಾತೃಭಾಷೆ. ಈ ಹಿನ್ನೆಲೆಯಲ್ಲಿ ಮಧ್ಯಪ್ರದೇಶದಲ್ಲಿ ಹಿಂದಿಯಲ್ಲಿ ಎಂಬಿಬಿಎಸ್ ಆರಂಭಿಸಲಾಗಿದೆ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರು ತಿಳಿಸಿದರು.
ಹಾವೇರಿ ಜಿಲ್ಲೆ ರಾಣೆಬೆನ್ನೂರಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹಿಂದಿ ಹೇರಿಕೆ ಇಲ್ಲ. ಈ ಕುರಿತಂತೆ ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ ಸ್ಫಷ್ಟಪಡಿಸಿದ್ದಾರೆ. ಸಿಎಂ ಬೊಮ್ಮಾಯಿ ರಾಷ್ಟ್ರ ನಾಯಕರ ಸಂಪರ್ಕದಲ್ಲಿದ್ದು, ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.
ಇದೇ ವೇಳೆ ಇಎಸ್ಐ ಆಸ್ಪತ್ರೆಗಳಿಗೆ ಔಷಧಿ ಕೊರತೆ ಇಲ್ಲ. ಮೂಲಸೌಲಭ್ಯಗಳ ಕೊರತೆ ಇಲ್ಲ. ಕೊರತೆ ಇರುವುದು ವೈದ್ಯರದ್ದು ಎಂದು ಹೆಬ್ಬಾರ್ ತಿಳಿಸಿದರು. ಸಂಜೆ ಬರುತ್ತಾರೆ ಮುಂಜಾನೆಯಷ್ಟರಲ್ಲಿ ಹೋಗುತ್ತಾರೆ. ಇದೇ ಸಮಸ್ಯೆ ಎಂದು ಸಚಿವ ಹೆಬ್ಬಾರ್ ತಿಳಿಸಿದರು. ಈ ಸಮಸ್ಯೆ ಯಾರಿಗೂ ತಪ್ಪಿಲ್ಲ. ಎಲ್ಲ ರಾಜ್ಯಗಳಲ್ಲಿ ಈ ಸಮಸ್ಯೆ ಇದೆ ಎಂದು ತಿಳಿಸಿದರು.
ಆಸ್ಪತ್ರೆಗಳು ವ್ಯವಸ್ಥಿತವಾಗಿ ನಡೆಯುತ್ತಿವೆ: ಈ ಸಮಸ್ಯೆಯಿಂದ ನಾವು ಸ್ವಲ್ಪ ಕಷ್ಟ ಅನುಭವಿಸುತ್ತೇವೆ. ಇಎಸ್ಐ ಆಸ್ಪತ್ರೆಗಳ ಶಸ್ತ್ರಚಿಕಿತ್ಸಾ ಕೇಂದ್ರಗಳ ನಿರ್ಮಾಣಕ್ಕೆ 46 ಕೋಟಿ ರೂಪಾಯಿ ನೀಡಿದ್ದೇವೆ. ರಾಜ್ಯದಲ್ಲಿ ಇಎಸ್ಐ ಆಸ್ಪತ್ರೆಗಳು ವ್ಯವಸ್ಥಿತವಾಗಿ ನಡೆಯುತ್ತಿವೆ ಎಂದು ಸಚಿವರು ಸಮರ್ಥಿಸಿಕೊಂಡರು.
ಕೇಂದ್ರ ಸರ್ಕಾರ ರಾಜ್ಯದ ಇಎಸ್ಐ ಆಸ್ಪತ್ರೆಗಳಿಗೆ ವರ್ಷಕ್ಕೆ 75 ಕೋಟಿ ರೂಪಾಯಿ ವೆಚ್ಚದ ಔಷಧಿ ವಿತರಿಸುತ್ತೆ. ರಾಜ್ಯದಲ್ಲಿ 114 ಇಎಸ್ಐ ಆಸ್ಪತ್ರೆಗಳಿವೆ. ಗುಲ್ಬರ್ಗಾ ಮತ್ತು ರಾಜಾಜಿನಗರದಲ್ಲಿರುವ ಇಎಸ್ಐ ಆಸ್ಪತ್ರೆಗಳನ್ನು ಕೇಂದ್ರ ಸರ್ಕಾರ ನೋಡಿಕೊಳ್ಳುತ್ತಿದೆ. ಉಳಿದಂತೆ ಏಳು ಆಸ್ಪತ್ರೆ ಮತ್ತು 114 ಇಎಸ್ಐ ಕೇಂದ್ರಗಳು ಕಾರ್ಮಿಕ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿವೆ ಎಂದರು.
ಇಎಸ್ಐ ಆಸ್ಪತ್ರೆ ಉದ್ಘಾಟಿಸಲಾಗಿದೆ: ಕೇಂದ್ರ ರಾಜ್ಯಕ್ಕೆ ಈ ವರ್ಷ 19 ಇಎಸ್ಐ ಆಸ್ಪತ್ರೆಗಳನ್ನು ಬಿಡುಗಡೆ ಮಾಡಿದೆ. ರಾಣೆಬೆನ್ನೂರಲ್ಲಿ 114 ನೇ ಇಎಸ್ಐ ಆಸ್ಪತ್ರೆ ಉದ್ಘಾಟಿಸಲಾಗಿದೆ. ರಾಣೆಬೆನ್ನೂರು ಆಸ್ಪತ್ರೆಗೆ ಸೂಕ್ತ ವೈದ್ಯಕೀಯ ಸಿಬ್ಬಂದಿ ಮತ್ತು ಮೂಲ ಸೌಲಭ್ಯ ಹಾಗೂ ಔಷಧಿ ನೀಡಲಾಗಿದೆ. ಇದರಿಂದ ಕಟ್ಟಡ ಕಾರ್ಮಿಕರಿಗೆ ಹೆಚ್ಚು ಅನುಕೂಲವಾಗುತ್ತೆ ಎಂದು ಹೇಳಿದರು.
ಉನ್ನತ ಚಿಕಿತ್ಸೆ ಪಡೆಯಬಹುದು: ಹಾವೇರಿ ಜಿಲ್ಲೆಯಲ್ಲಿ 1 ಲಕ್ಷ 95 ಸಾವಿರ ಕಾರ್ಮಿಕರು, 31 ಸಾವಿರ ಕಟ್ಟಡ ಕಾರ್ಮಿಕರಿದ್ದು, ಅವರಿಗೆಲ್ಲಾ ಪ್ರಾಥಮಿಕ ಚಿಕಿತ್ಸೆ ರಾಣೆಬೆನ್ನೂರಲ್ಲಿ ಸಿಗಲಿದೆ. ಇದಕ್ಕಿಂತ ಉನ್ನತ ಚಿಕಿತ್ಸೆಗಾಗಿ ರಾಜ್ಯದಲ್ಲಿ ಏಳು ದೊಡ್ಡ ಆಸ್ಪತ್ರೆಗಳನ್ನು ಸ್ಥಾಪಿಸಲಾಗಿದ್ದು, ಅಲ್ಲಿ ಶಸ್ತ್ರಚಿಕಿತ್ಸೆ ಸೇರಿದಂತೆ ಉನ್ನತ ಚಿಕಿತ್ಸೆ ಪಡೆಯಬಹುದು ಎಂದು ಸಚಿವ ಹೆಬ್ಬಾರ್ ಅವರು ತಿಳಿಸಿದರು.
ಓದಿ: ವಸೂಲಿ ಮಾಡುವುದೇ ಸರ್ಕಾರದ ಕೆಲಸ : ಹೆಚ್ ಡಿ ಕುಮಾರಸ್ವಾಮಿ ಕಿಡಿ