ಹಾವೇರಿ: ಚುನಾವಣೆ ಹತ್ತಿರ ಬಂತು. ಸಾಹಿತ್ಯ ಸಮ್ಮೇಳನ ಮುಂದೆ ಹಾಕಲು ಬರುವುದಿಲ್ಲ. ಕಸಾಪ ರಾಜ್ಯಾಧ್ಯಕ್ಷರಿಗೆ ನಮ್ಮ ಸಮಸ್ಯೆ ಅರ್ಥವಾಗುವುದಿಲ್ಲ ಎಂದು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಅಭಿಪ್ರಾಯಪಟ್ಟಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಅವರು, ಚುನಾವಣೆ ಹತ್ತಿರವಿದ್ದಾಗ ಸಮ್ಮೇಳನ ನಡೆಸುವ ಕಷ್ಟ ಏನು ಎಂದು ನಮಗೆ ಗೊತ್ತಾಗುತ್ತದೆ. 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಿಗದಿಯಂತೆ ಸೆಪ್ಟಂಬರ್‌ನಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ. ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಷಿ ಸಮ್ಮೇಳನದ ಮುಂದೆ ಹಾಕುವ ಕುರಿತಂತೆ ಪತ್ರ ಬರೆದಿರುವ ಬಗ್ಗೆ ಸಿಎಂ ಜೊತೆ ಚರ್ಚಿಸುವುದಾಗಿ ಅವರು ತಿಳಿಸಿದರು.
ಅಧಿಕಾರಿಗಳು ತಲೆಕೆಡಿಸಿಕೊಳ್ಳುವ ವಿಷಯಕ್ಕೆ ತಲೆಕೆಡಿಸಿಕೊಳ್ಳಲ್ಲ, ಬದಲಿಗೆ ತಲೆಕೆಡಿಸಿಕೊಳ್ಳದ ವಿಷಯಕ್ಕೆ ತಲೆಕೆಡಿಸಿಕೊಳ್ಳುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಮಳೆಯಿಂದಾದ ನಷ್ಟಕ್ಕೆ ಜಿಲ್ಲಾಡಳಿತ ಯುದ್ಧೋಪಾದಿಯಲ್ಲಿ ಸ್ಪಂದಿಸುವಂತೆ ಜಿಲ್ಲಾಧಿಕಾರಿಗೆ ಆದೇಶ ನೀಡಿದ್ದೇನೆ ಎಂದರು.
ಮೂರು ದಿನದೊಳಗೆ ಅಧಿಕಾರಿಗಳು ಮಳೆಯಿಂದ ಹಾನಿಗೊಳಗಾದ ಸ್ಥಳದ ಪರಿಶೀಲನೆ ನಡೆಸಿ ಮಾಹಿತಿ ಕಲೆಹಾಕಬೇಕು. ಸಿಎಂ ಬಸವರಾಜ್ ಬೊಮ್ಮಾಯಿ ಅವರು ವಿದೇಶದಿಂದ ಬಂದ ಬಳಿಕ ಮಳೆಹಾನಿಯ ಕುರಿತಂತೆ ಚರ್ಚಿಸಲಾಗುವುದು ಎಂದು ತಿಳಿಸಿದರು. ಸರ್ಕಾರದಲ್ಲಿ ಹಣದ ಸಮಸ್ಯೆಯಿಲ್ಲ. ಪ್ರತಿ ತಹಶೀಲ್ದಾರ್ ಖಾತೆಯಲ್ಲಿ ಕನಿಷ್ಟ 15 ಲಕ್ಷ ರೂಪಾಯಿ ಇರುವಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.
ಹಾನಿಗೊಳಗಾದ ಸ್ಥಳಕ್ಕೆ ಅಧಿಕಾರಿಗಳು ಒಂದು ಗಂಟೆಯಲ್ಲಿ ಭೇಟಿ ನೀಡಬೇಕು. ಅಗತ್ಯವಿದ್ದರೆ 5 ಲಕ್ಷ ರೂಪಾಯಿ ಪರಿಹಾರ ನೀಡಲು ಸೂಚಿಸಲಾಗುವುದು. ಅಧಿಕಾರಿಗಳು ಸರಿಯಾಗಿ ಪರಿಶೀಲನೆ ಮಾಡಬೇಕು. ಅಧಿಕಾರಿಗಳು ಒಮ್ಮೊಮ್ಮೆ ಪರಿಹಾರ ನೀಡುವ ಹಣದಿಂದ ಮನೆಯ ಹಂಚು ಮೇಲಿಂದ ಕೆಳಗೆ ತರಲು ಸಾಲುವುದಿಲ್ಲ ಎಂದು ತಿಳಿಸಿದರು.
ಕೆಲವು ದಲ್ಲಾಳಿಗಳು ರೈತರಿಗೆ ದೋಖಾ ಮಾಡಲು ರೈತರನ್ನ ಬಳಸಿಕೊಳ್ಳುತ್ತಿದ್ದಾರೆ. ಇಂತಹ ಸಂಚುಗಳಿಗೆ ಬಲಿಯಾಗಬಾರದು. ಜಿಲ್ಲಾ ಉಸ್ತುವಾರಿ ಸಚಿವರಿಗೆ ಅವರ ಜಿಲ್ಲಾ ಉಸ್ತುವಾರಿ ನೀಡುವುದು ಸಿಎಂ ಪರಮೊಚ್ಚಾಧಿಕಾರ ಎಂದು ಹೆಬ್ಬಾರ್ ತಿಳಿಸಿದರು. ಸಿಎಂ ಸಹ ಆಯಾ ಜಿಲ್ಲೆಗಳ ಉಸ್ತುವಾರಿಯನ್ನ ಆಯಾ ಜಿಲ್ಲೆಗಳ ಸಚಿವರಿಗೆ ನೀಡಬೇಕು ಅಂದುಕೊಂಡಿದ್ದರು. ಆದರೆ ಹೈಕಮಾಂಡ್ ಈ ರೀತಿ ಬೇರೆ ರಾಜ್ಯದಲ್ಲಿ ಮಾಡಿದ್ದನ್ನು ಸಚಿವರ ಜಿಲ್ಲೆ ಬಿಟ್ಟು ಬೇರೆ ಜಿಲ್ಲೆಯವರಿಗೆ ಉಸ್ತುವಾರಿ ನೀಡುವಂತೆ ಸೂಚಿಸಿದೆ ಎಂದು ಅವರು ಹೇಳಿದರು.
ಓದಿ: ಅಂಕೋಲಾದಲ್ಲಿ ಗಮನ ಸೆಳೆದ ಮಾವು ಮೇಳ; ತರಹೇವಾರಿ ಮ್ಯಾಂಗೋ ಖರೀದಿಸಿದ ಜನ