ರಾಣೆಬೆನ್ನೂರು: ನಗರಸಭಾ ಪೌರಕಾರ್ಮಿಕರ ವಸತಿಗಾಗಿ ನಿರ್ಮಿಸಿದ ಮನೆಗಳನ್ನು ಇಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಫಲಾನುಭವಿಗಳಿಗೆ ಹಸ್ತಾಂತರ ಮಾಡಿದರು.
ನ. 4ರಂದು ಈಟಿವಿ ಭಾರತದಿಂದ ಪೌರಕಾರ್ಮಿಕರ ಮನೆಗಳಿಗೆ ಬೀಗ ಎಂದು ವಿಸ್ತರವಾದ ಸುದ್ದಿ ಬಿತ್ತರ ಮಾಡಲಾಗಿತ್ತು. ಈ ಹಿನ್ನೆಲೆ ಎಚ್ಚೆತ್ತುಕೊಂಡ ನಗರಸಭೆ ಅಧಿಕಾರಿಗಳು, ಕ್ರಮ ಕೈಗೊಂಡಿದ್ದರು. ಇಂದು ಗೃಹ ಸಚಿವರಿಂದ ಪೌರಕಾರ್ಮಿಕ ಫಲಾನುಭವಿಗಳಿಗೆ ಮನೆ ಹಸ್ತಾಂತರ ಮಾಡಲಾಯಿತು. ಕರ್ನಾಟಕ ಗೃಹ ಮಂಡಳಿ ಸಹಾಯಧನ ಅಡಿಯಲ್ಲಿ ಇಲ್ಲಿನ ಜೆ.ಹೆಚ್.ಪಟೇಲ್ ನಗರದಲ್ಲಿ ಜಿ-1 ಮಾದರಿಯಲ್ಲಿ ಸುಮಾರು 30 ಮನೆಗಳನ್ನು ಕಟ್ಟಲಾಗಿದೆ. ಪ್ರತಿ ಮನೆಗೆ ಸುಮಾರು 18 ಲಕ್ಷದಂತೆ ಸುಮಾರು 2 ಕೋಟಿ 70 ಲಕ್ಷ ರೂ. ವ್ಯಯಿಸಲಾಗಿದೆ.
130 ಮನೆಗಳಿಗೆ ಪ್ರಸ್ತಾವನೆ ಸಲ್ಲಿಕೆ
ಪೌರಕಾರ್ಮಿಕರಿಗೆ ಮನೆಗಳನ್ನು ಹಸ್ತಾಂತರ ಮಾಡಿದ ನಂತರ ಮಾತನಾಡಿದ ಬೊಮ್ಮಾಯಿ, ರಾಣೆಬೆನ್ನೂರು ನಗರದಲ್ಲಿ ಕೆಲಸ ಮಾಡುತ್ತಿರುವ 130 ಪೌರಕಾರ್ಮಿಕರಿಗೆ ಮನೆಗಳನ್ನು ಕಟ್ಟಿಸಿಕೊಡಲು ಸರ್ಕಾರಕ್ಕೆ ಪ್ರಸ್ತಾವನೆ ಮಾಡಲಾಗುತ್ತದೆ. ಬಿಜೆಪಿ ಸರ್ಕಾರ ಪೌರಕಾರ್ಮಿಕರಿಗಾಗಿ ಸೂಕ್ತ ಸೌಲಭ್ಯಗಳನ್ನು ನೀಡಲು ಮುಂದಾಗಿದೆ ಎಂದರು.