ಹಾವೇರಿ: ಲಾಡ್ಜ್ನಲ್ಲಿದ್ದ ಜೋಡಿ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಲೈಂಗಿಕ ದೌರ್ಜನ್ಯದ ಕುರಿತು ಸಂತ್ರಸ್ತ ಮಹಿಳೆ ನೀಡಿದ ದೂರಿನ ಆಧಾರದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಜನವರಿ 8ರಂದು ಹಾನಗಲ್ ತಾಲೂಕಿನಲ್ಲಿರುವ ಲಾಡ್ಜ್ ರೂಂಗೆ ನುಗ್ಗಿ ಹಲ್ಲೆ ನಡೆಸಿ ಅನೈತಿಕ ಪೊಲೀಸ್‌ಗಿರಿ ಪ್ರದರ್ಶಿಸಿದ್ದ ಈ ಪ್ರಕರಣದಲ್ಲಿ ಈಗಾಗಲೇ ಮೂವರನ್ನು ಬಂಧಿಸಲಾಗಿದೆ. ಏಳು ಜನ ಆರೋಪಿಗಳು ಹಲ್ಲೆ ನಡೆಸಿದ್ದಲ್ಲದೇ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತ ಮಹಿಳೆ ಗುರುವಾರ ಜಿಲ್ಲಾ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ದಾಖಲಿಸಿದ್ದಾರೆ. ಈ ಹೇಳಿಕೆ ಆಧರಿಸಿ, ಸೆಕ್ಷನ್ 376 ಡಿ ಅಡಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
"ಪ್ರಕರಣ ನಡೆದ ಮರುದಿನ ಓರ್ವ ಆರೋಪಿ ಅಪಘಾತಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಡಿಸ್ಚಾರ್ಜ್ ಆದ ಬಳಿಕ ವಶಕ್ಕೆ ಪಡೆಯುತ್ತೇವೆ. ಇನ್ನುಳಿದ ಆರೋಪಿಗಳ ಗುರುತು ಪತ್ತೆಯಾಗಿದ್ದು, ಬಂಧನಕ್ಕೆ ಬಲೆ ಬೀಸಿದ್ದೇವೆ" ಎಂದು ಅವರು ತಿಳಿಸಿದ್ದಾರೆ.
ಹಾನಗಲ್ ತಾಲೂಕಿನ ಖಾಸಗಿ ಲಾಡ್ಜ್ವೊಂದರ ರೂಂನಲ್ಲಿ ಜೋಡಿಯೊಂದು ತಂಗಿತ್ತು. ಈ ಬಗ್ಗೆ ಕೆಲವರು ನೀಡಿದ ಮಾಹಿತಿ ಮೇರೆಗೆ ಯುವಕರ ಗುಂಪು ಏಕಾಏಕಿ ಲಾಡ್ಜ್ಗೆ ನುಗ್ಗಿತ್ತು. ನೀರು ಬರುತ್ತಿದ್ದೆಯೇ ಎಂದು ಚೆಕ್ ಮಾಡುವ ನೆಪದಲ್ಲಿ ರೂಂ ಬಾಗಿಲು ತೆರೆಯುವಂತೆ ಜೋಡಿಗೆ ಹೇಳಿದ್ದರು. ಬಳಿಕ ರೂಂಗೆ ನುಗ್ಗಿ ಹಲ್ಲೆ ಮಾಡಿದ ವಿಡಿಯೋ ವೈರಲ್ ಆಗಿತ್ತು. ನಂತರ ಮಹಿಳೆಯನ್ನು ಲಾಡ್ಜ್ನಿಂದ ಹೊರಗೆ ಕರೆದುಕೊಂಡು ಬಂದು ಧಮ್ಕಿ ಹಾಕಿದ್ದ ವಿಡಿಯೋ ವೈರಲ್ ಆಗಿತ್ತು.
ಇದನ್ನೂ ಓದಿ: ಹಾವೇರಿ: ಲಾಡ್ಜ್ನಲ್ಲಿ ಜೋಡಿ ಮೇಲೆ ಹಲ್ಲೆ ಪ್ರಕರಣ; ಇಬ್ಬರ ಬಂಧನ, ಮೂವರಿಗಾಗಿ ಶೋಧ