ಹಾವೇರಿ: ಜಿಲ್ಲಾ ಪಂಚಾಯಿತಿಗೆ ಸಂಬಂಧಿಸಿದ ಕೋಟ್ಯಂತರ ರೂ. ಮೌಲ್ಯದ ಪೈಪ್ಗಳು ಕಳುವಾಗಿವೆ ಎಂದು ಜಿಲ್ಲಾ ಪಂಚಾಯತ್ ಸದಸ್ಯ ಆರೋಪಿಸಿದ್ದಾರೆ.
ಹಾವೇರಿ ಜಿಲ್ಲಾ ಪಂಚಾಯತಿ ಜಲನಿರ್ಮಲ ಯೋಜನೆಯಡಿ ಕಳೆದ ಕೆಲವು ವರ್ಷಗಳ ಹಿಂದೆ 768 ಪಿವಿಸಿ ಪೈಪ್ಗಳನ್ನು ತರಿಸಲಾಗಿತ್ತು. ಆದ್ರೆ ಯೋಜನೆ ಸ್ಥಗಿತ ಆಗಿದ್ದರಿಂದ ಪೈಪ್ಗಳು ಹಾಗೇ ಉಳಿದಿದ್ದವು. ಬಹುತೇಕ ಪೈಪ್ಗಳಲ್ಲಿ ಮಣ್ಣು ತುಂಬಿ, ಗಿಡಗಂಟಿಗಳು ಬೆಳೆದು ಹಾಳಾಗೋ ಹಂತಕ್ಕೆ ತಲುಪಿದ್ದವು. ಹೀಗೆ ಕಂತೆ ಕಂತೆಯಾಗಿ ಬಿದ್ದಿದ್ದ ಪೈಪ್ಗಳಲ್ಲಿ 461 ಪೈಪ್ಗಳು ಬೆಳಗಾಗುವಷ್ಟರಲ್ಲಿ ಮಂಗಮಾಯವಾಗಿವೆ. ಯಾರೋ ಪೈಪ್ಗಳನ್ನ ಕದ್ದುಕೊಂಡು ಹೋಗಿದ್ದಾರೆ. ಇದರಲ್ಲಿ ಅಧಿಕಾರಿಗಳೂ ಶಾಮೀಲಾಗಿದ್ದಾರೆ. ಕೋಟ್ಯಂತರ ರೂಪಾಯಿ ಮೌಲ್ಯದ ಪೈಪ್ಗಳನ್ನ ಕದ್ದವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ, ಸೂಕ್ತ ಕ್ರಮ ಕೈಗೊಳ್ಳಿ ಅಂತಾ ಜಿಲ್ಲಾ ಪಂಚಾಯಿತಿ ಹಾಲಿ ಸದಸ್ಯ ಹಾಗೂ ಮಾಜಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ ಒತ್ತಾಯಿಸಿದ್ದಾರೆ.
ಆದ್ರೆ ಪೈಪ್ಗಳನ್ನು ನೀರು ಸರಬರಾಜು ಮಾಡಲು ಬಳಸಿಕೊಂಡಿರುವುದಾಗಿ ಹಾವೇರಿ ಶಾಸಕ ನೆಹರು ಓಲೇಕಾರ್ ಪ್ರತ್ಯುತ್ತರ ನೀಡಿದ್ದಾರೆ. ಆದ್ರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಮಾತ್ರ ಪ್ರಕರಣ ದಾಖಲಿಸಬೇಕೋ, ಬೇಡವೋ ಎನ್ನುವ ಗೊಂದಲದಲ್ಲಿದ್ದಾರೆ.
ಪೈಪ್ಗಳನ್ನ ಕದ್ದವರ ಮೇಲೆ ಕೇಸ್ ಮಾಡ್ತೀವಿ. ಹಾಗೆ ಹೀಗೆ ಅನ್ನೋ ಮಾತುಗಳು ಕೇಳ್ತಿದ್ದಂತೆ ಪೈಪ್ಗಳು ಮಾಯವಾಗಿರೋದರ ಹಿಂದಿನ ಅಸಲಿ ಸತ್ಯ ಗೊತ್ತಾಗಿದೆ. ಹಾವೇರಿ ತಾಲೂಕಿನ ಹಲವು ಗ್ರಾಮಗಳಲ್ಲಿ ಕುಡಿಯೋ ನೀರಿನ ಸಮಸ್ಯೆ ತಲೆದೋರಿದೆ. ಹೊಸದಾಗಿ ಪೈಪ್ಗಳನ್ನ ತಂದು ಪೈಪ್ಲೈನ್ ಮಾಡಿ ನೀರು ಕೊಡಬೇಕು ಅಂದ್ರೆ ತುಂಬಾ ತಡವಾಗುತ್ತೆ. ಹೀಗಾಗಿ ಇರೋ ಪೈಪ್ಗಳನ್ನೇ ಬಳಸಿಕೊಂಡು ಕುಡಿಯೋ ನೀರಿನ ಸಮಸ್ಯೆಗೆ ಮುಕ್ತಿ ಹಾಡಬೇಕು ಅಂತ ರಾತ್ರೋರಾತ್ರಿ ಪೈಪ್ಗಳನ್ನ ಎತ್ತಿಕೊಂಡು ಹೋಗಲಾಗಿದೆ. ಜೊತೆಗೆ ಅಧಿಕಾರಿಗಳಿಗೂ ಕೂಡ ಹೇಳಿ ಪೈಪ್ಗಳನ್ನ ಬಳಕೆ ಮಾಡಿಕೊಳ್ಳಲಾಗಿದೆ. ಹಾವೇರಿ ತಾಲೂಕಿನ ಕನವಳ್ಳಿ, ಮಲ್ಲಮ್ಮನಕೆರೆಗೆ ನೀರು ತರಲು ಪೈಪ್ಗಳನ್ನ ಅಳವಡಿಸಲಾಗ್ತಿದೆ ಎಂದು ಹಾವೇರಿ ಶಾಸಕ ನೆಹರು ಓಲೇಕಾರ್ ತಿಳಿಸಿದ್ದಾರೆ.