ಹಾವೇರಿ : ರೈತರ ಪಂಪ್‌ಸೆಟ್‌ಗಳಿಗೆ ಹೊಸದಾಗಿ ವಿದ್ಯುತ್ ಸಂಪರ್ಕ ನೀಡಲು ಹೆಸ್ಕಾಂ 10 ಸಾವಿರ ರೂಪಾಯಿ ಅಧಿಕ ಹಣ ಪಡೆಯುತ್ತಿದೆ ಎಂದು ಹಾವೇರಿ ಜಿಲ್ಲಾ ರೈತ ಸಂಘ ಮತ್ತು ಹಸಿರುಸೇನೆ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಆರೋಪಿಸಿದ್ದಾರೆ.
ಹಾವೇರಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಅಕ್ರಮ ಸಕ್ರಮ ವಿದ್ಯುತ್ ಸಂಪರ್ಕ ನೀಡಲು 10 ಸಾವಿರ ರೂಪಾಯಿ ಪಡೆಯಲಾಗುತ್ತಿತ್ತು. ಆದರೆ ಈಗ ಹೊಸದಾಗಿ ಪಂಪ್‌ಸೆಟ್ ಸಂಪರ್ಕಕ್ಕೆ ಸಹ ರೈತರು 10 ಸಾವಿರ ರೂಪಾಯಿಗೂ ಅಧಿಕ ಹಣ ನೀಡಬೇಕಾಗಿದೆ. ಅಧಿಕ ಹಣ ನೀಡದಿದ್ದರೆ ವಿದ್ಯುತ್ ಸಂಪರ್ಕ ನೀಡುವುದಿಲ್ಲ. ಈ ರೀತಿಯ ರೂಲ್ ನಮ್ಮ ಹೆಸ್ಕಾಂನಲ್ಲಿ ಮಾತ್ರವಿದ್ದು, ಉಳಿದ ವಿದ್ಯುತ್ ನಿಗಮಗಳಲ್ಲಿ ಇಲ್ಲ ಎಂದು ಅವರು ಹೇಳಿದರು.
ರಾಜ್ಯಕ್ಕೆ 676 ಕೋಟಿ ರೂಪಾಯಿ ಬೆಳೆವಿಮೆ ಮಂಜೂರಾಗಿದ್ದು, ಅದರಲ್ಲಿ ಹಾವೇರಿ ಜಿಲ್ಲೆಗೆ ಸುಮಾರು 434 ಕೋಟಿ ರೂಪಾಯಿ ಮಂಜೂರಾಗಿದೆ ಎಂದು ತಿಳಿಸಿದರು. ಬೆಳೆವಿಮೆ ಬಿಡುಗಡೆಗೆ ರೈತ ಸಂಘ ಸಾಕಷ್ಟು ಹೋರಾಟ ನಡೆಸಿತ್ತು. ಇದರ ಫಲವಾಗಿ ರಾಜ್ಯದಲ್ಲಿ ಅತಿಹೆಚ್ಚು ಬೆಳೆವಿಮೆ ಹಾವೇರಿ ಜಿಲ್ಲೆಗೆ ಬಿಡುಗಡೆಯಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಬೆಳೆವಿಮೆಗಾಗಿ 1,65,688 ರೈತರು 1,87,706 ಅರ್ಜಿಗಳನ್ನು ಸಲ್ಲಿಕೆ ಮಾಡಲಾಗಿತ್ತು. ಇದೀಗ ಬೆಳೆವಿಮೆ ಕಂಪನಿಗಳು ವಿಮೆ ಘೋಷಣೆ ಮಾಡಿರುವುದಕ್ಕೆ ಸ್ವಾಗತ ಮತ್ತು ಅಭಿನಂದನೆ ಸಲ್ಲಿಸಿದರು. ಜಿಲ್ಲೆಯ ಬ್ಯಾಂಕ್‌ಗಳು ರೈತರ ಬೆಳೆವಿಮೆ ಹಣವನ್ನು ರೈತರಿಗೆ ನೀಡಬೇಕು, ಬದಲಿಗೆ ಅವರ ಸಾಲಕ್ಕೆ ಮುರಿದುಕೊಳ್ಳಬಾರದು ಎಂದು ಆಗ್ರಹಿಸಿದರು.
ಮಳೆಯಿಂದ ಹಾನಿಗೊಳಗಾದ ರೈತರಿಗೆ ಸರ್ಕಾರ ಆದಷ್ಟು ಬೇಗ ಪರಿಹಾರ ನೀಡಬೇಕು. ಮಳೆಗೆ ಮನೆ ಕಳೆದುಕೊಂಡ ರೈತರ ಮನೆ ನಿರ್ಮಾಣಕ್ಕೆ ಹಣ ನೀಡಬೇಕು ಎಂದು ಮಲ್ಲಿಕಾರ್ಜುನ ಬಳ್ಳಾರಿ ಒತ್ತಾಯಿಸಿದರು. ಕೆಲ ಬ್ಯಾಂಕ್‌ಗಳು ರೈತರಿಗೆ ಸಾಲ ವಸೂಲಾತಿ ಮಾಡಿ ನಂತರ ಸಾಲ ನೀಡಲು ಸಿಬಿಲ್ ಸ್ಕೋರ್ ಬರಲ್ಲ ಎನ್ನುತ್ತಿವೆ. ಇದರಿಂದ ರೈತರು ಖಾಸಗಿಯವರ ಹತ್ತಿರ ಅಧಿಕ ಬಡ್ಡಿ ದರದಲ್ಲಿ ಸಾಲ ಮಾಡಿ ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ. ಸರ್ಕಾರ ಈ ಕೂಡಲೇ ರೈತರ ಬಗ್ಗೆ ವಿಶೇಷ ಆಸಕ್ತಿ ವಹಿಸಬೇಕು ಎಂದು ಬಳ್ಳಾರಿ ಒತ್ತಾಯಿಸಿದರು.
ಡಿಸಿಸಿ ಬ್ಯಾಂಕ್ ಮಂಜೂರು ಮಾಡಬೇಕು: ಹಾವೇರಿ ಜಿಲ್ಲೆಗೆ ಡಿಸಿಸಿ ಬ್ಯಾಂಕ್ ಆಗಬೇಕು ಎಂದು ಹೋರಾಟ ಮಾಡಿದವರಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪ್ರಮುಖರು. ಬೊಮ್ಮಾಯಿ ಈಗ ಸಿಎಂ ಆಗಿದ್ದಾರೆ. ಹಾವೇರಿ ಜಿಲ್ಲೆಗೆ ಡಿಸಿಸಿ ಬ್ಯಾಂಕ್ ಮಂಜೂರು ಮಾಡಬೇಕು. ಅದನ್ನ ಬಿಟ್ಟು ರಿಜನರ್ ಆಫೀಸ್ ಮಾಡಲು ಸಿಎಂ ಹೊರಟಿದ್ದಾರೆ ಎಂಬ ಮಾಹಿತಿ ಇದೆ. ಬೊಮ್ಮಾಯಿ ಕಾಟಾಚಾರಕ್ಕೆ ಈ ರೀತಿ ಮಾಡಬಾರದು, ಬದಲಿಗೆ ಡಿಸಿಸಿ ಬ್ಯಾಂಕ್ ಮಂಜೂರು ಮಾಡಬೇಕು ಎಂದು ಮಲ್ಲಿಕಾರ್ಜುನ ಬಳ್ಳಾರಿ ಮನವಿ ಮಾಡಿದರು.
ಇತ್ತೀಚೆಗೆ ಬಜೆಟ್ನಲ್ಲಿ ಘೋಷಿಸಿರುವಂತೆ ಜಿಲ್ಲೆಯಲ್ಲಿನ ರೈತರಿಗೆ ಬಡ್ಡಿ ರಹಿತವಾಗಿ 5 ಲಕ್ಷದವರೆಗೆ ಸಾಲ ಸಿಗುವಂತಾಗಬೇಕು. ಇಂಧನ ಸಚಿವರು ರೈತರಿಗೆ 7 ಗಂಟೆ ತ್ರಿಪೇಸ್ ವಿದ್ಯುತ್ ನೀಡುತ್ತಿರುವುದಾಗಿ ಹೇಳಿಕೆ ನೀಡುತ್ತಿದ್ದಾರೆ. ಆದರೆ ಹಗಲಿನಲ್ಲಾಗಲಿ, ರಾತ್ರಿಯಲ್ಲಾಗಲಿ ಪೂರ್ಣವಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಹಗಲು 3 ಗಂಟೆ ರಾತ್ರಿ 4 ಗಂಟೆ ವಿದ್ಯುತ್ ಪೂರೈಕೆಯಾಗುತ್ತಿದೆ. ಇಂಧನ ಸಚಿವರು ಈ ರೀತಿ ಹೇಳಿಕೆ ನೀಡುವುದನ್ನ ನಿಲ್ಲಿಸಲಿ. ಇಲ್ಲ ದಿನಕ್ಕೆ7 ಗಂಟೆ ಹಗಲಿನಲ್ಲಾಗಲಿ, ರಾತ್ರಿಯಲ್ಲಾಗಲಿ ತ್ರಿಪೇಸ್ ವಿದ್ಯುತ್ ಪೂರೈಕೆ ಮಾಡಲಿ ಎಂದು ಮಲ್ಲಿಕಾರ್ಜುನ ಬಳ್ಳಾರಿ ಹೇಳಿದರು.
ಅಡಿಕೆ ಬೆಳೆಗೆ ಪರಿಹಾರವನ್ನು ಸರ್ಕಾರ ನೀಡಿಲ್ಲ: ಹೆಸ್ಕಾಂ ಈಗಾಗಲೇ ನಿಗದಿತ ಶುಲ್ಕವನ್ನು ವಿದ್ಯುತ್ ಬಿಲ್‌ನಲ್ಲಿ ವಸೂಲಿ ಮಾಡುತ್ತಿದೆ. ಇದನ್ನಾದರೂ ನಿಲ್ಲಿಸಲಿ, ಇಲ್ಲವೇ ವಿದ್ಯುತ್ ಶುಲ್ಕದಲ್ಲಿ ಯಾವುದೇ ಏರಿಕೆ ಮಾಡಬಾರದು. ನಿಗದಿತ ಶುಲ್ಕ ಕೈಬಿಟ್ಟು ದರ ಏರಿಕೆ ಮಾಡಲಿ ಎಂದು ಮಲ್ಲಿಕಾರ್ಜುನ ಬಳ್ಳಾರಿ ತಿಳಿಸಿದರು. ಅತಿವೃಷ್ಟಿಯಲ್ಲಿ ಜಿಲ್ಲೆಯಲ್ಲಾದ ಅಡಿಕೆ ಬೆಳೆಗೆ ಪರಿಹಾರವನ್ನು ಸರ್ಕಾರ ನೀಡಿಲ್ಲ ಎಂದು ಬಳ್ಳಾರಿ ಆರೋಪಿಸಿದರು.
ರಾಜ್ಯದ ವಿವಿಧೆಡೆಯಲ್ಲಿ ಹಾನಿಗೊಳಗಾದ ಜಿಲ್ಲೆಗಳ ಅಡಿಕೆ ಬೆಳೆಗೆ ಪರಿಹಾರ ನೀಡಿದ್ದಾರೆ. ಆದರೆ ನಮ್ಮ ಜಿಲ್ಲೆಗೆ ನೀಡುತ್ತಿಲ್ಲ. ಜಿಲ್ಲೆಯಲ್ಲಿ ಅತಿಹೆಚ್ಚು ಬೆಳೆವಿಮೆ ಬಿಡುಗಡೆ ಆಗಿದ್ದಕ್ಕೆ ರೈತ ಸಂಘ ಹೋರಾಟ ಸಹ ಕಾರಣ. ಈ ಕುರಿತಂತೆ ರೈತರಿಗೆ ಸರಿಯಾದ ಮಾರ್ಗದರ್ಶನ ನೀಡಿದ್ದರಿಂದ ಜಿಲ್ಲೆ ಇವತ್ತು ರಾಜ್ಯದಲ್ಲಿಯೇ ಅತಿ ಹೆಚ್ಚು ಬೆಳೆವಿಮೆ ಪಡೆದಿದೆ ಎಂದು ಬಳ್ಳಾರಿ ವಿವರಿಸಿದರು.
ಇದನ್ನೂ ಓದಿ : ರಾಮನಗರ ಜಿಲ್ಲಾ ಆಸ್ಪತ್ರೆಗೆ ಚಾಲನೆ ನೀಡಿದ ಮೂರು ಪಕ್ಷದ ನಾಯಕರು